ಲಕ್ಷದ್ವೀಪ ಮಾಲ್ದೀವ್ಸ್ ಅಲ್ಲ, ಆಗಲೂ ಸಾಧ್ಯವಿಲ್ಲ: ತಜ್ಞರ ಎಚ್ಚರಿಕೆ

Update: 2024-01-24 13:17 GMT

Photo: PTI 

ಹೊಸದಿಲ್ಲಿ: ಭಾರತ ಮತ್ತು ಮಾಲ್ದೀವ್ಸ್ ನಡುವಿನ ಸಂಬಂಧ ಬಿಗಡಾಯಿಸಿರುವ ಹೊತ್ತಿನಲ್ಲೇ ಸ್ಥಳೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಲಕ್ಷದ್ವೀಪವನ್ನು ಪರ್ಯಾಯ ಪ್ರವಾಸಿ ತಾಣವನ್ನಾಗಿ ಆಯ್ದುಕೊಳ್ಳಬೇಕು. ಆ ಮೂಲಕ ಸ್ಥಳೀಯ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು ಎಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ. ಆದರೆ, ಲಕ್ಷದ್ವೀಪವೆಂದೂ ಮಾಲ್ದೀವ್ಸ್ ಆಗಲು ಸಾಧ್ಯವಿಲ್ಲ ಎಂಬುದು ತಜ್ಞರ ಅಭಿಮತ. 

ಕೇರಳದ ಕರಾವಳಿ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಅರಬ್ಬೀ ಸಮುದ್ರದಲ್ಲಿನ ಈ ಪುಟ್ಟ ದ್ವೀಪದ ಬಗ್ಗೆ ಪ್ರವಾಸಿಗರು ತೀವ್ರ ಆಸಕ್ತಿ ತೋರುತ್ತಿರುವುದು ಸ್ವತಃ ಪ್ರವಾಸೋದ್ಯಮ ಸಂಸ್ಥೆಗಳನ್ನೂ ಅಚ್ಚರಿಗೊಳಿಸಿದೆ. ಅಂತರ್ಜಾಲ ಪ್ರವಾಸಿ ಪೋರ್ಟಲ್ ಆದ MakeMyTrip ಪ್ರಕಾರ, ಲಕ್ಷದ್ವೀಪದ ಕುರಿತು ಹುಡುಕಾಟ ನಡೆಸುತ್ತಿರುವ ಪ್ರವಾಸಿಗರ ಸಂಖ್ಯೆ ಶೇ. 3,400ರಷ್ಟು ಭಾರಿ ಹೆಚ್ಚಳ ಕಂಡಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಗೂಗಲ್ ನಲ್ಲಿ ಲಕ್ಷದ್ವೀಪಕ್ಕೆ ನಡೆಸುವ ಹುಡುಕಾಟವು ಹಲವಾರು ದಿನಗಳ ಕಾಲ ಟ್ರೆಂಡ್ ಆಗಿತ್ತು. 

ಹೀಗಿದ್ದೂ ಲಕ್ಷದ್ವೀಪ ಮಾಲ್ದೀವ್ಸ್ ಆಗಲು ಸಾಧ್ಯವಿಲ್ಲ ಎನ್ನುತ್ತಾರೆ ಪ್ರವಾಸೋದ್ಯಮದ ತಜ್ಞರು. ಹಿಂದೂ ಮಹಾಸಾಗರದಲ್ಲಿ 9,000 ಚದರ ಕಿಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಮಾಲ್ದೀವ್ಸ್ ದ್ವೀಪ ಸಮೂಹವು ಸುಮಾರು 1,200 ಹವಳದ ದ್ವೀಪಗಳನ್ನು ಹೊಂದಿದೆ. ಮಾಲ್ದೀವ್ಸ್ ನೊಂದಿಗೆ ಹೋಲಿಸಿದರೆ ಲಕ್ಷದ್ವೀಪವು ಕೇವಲ 36 ಹವಳ ದ್ವೀಪಗಳನ್ನು ಒಳಗೊಂಡಿದೆ. (ಪರಾಲಿ ದ್ವೀಪವನ್ನು ಕೈಬಿಟ್ಟಿರುವುದರಿಂದ ಈಗ ಇರುವುದು ಕೇವಲ 35 ಹವಳ ದ್ವೀಪಗಳು ಮಾತ್ರ). ಈ ದ್ವೀಪ ಸಮೂಹದ ವ್ಯಾಪ್ತಿ ಕೂಡಾ ತೀರಾ ಕಿರಿದಾಗಿದ್ದು, 32 ಚದರ ಕಿಮೀ ಮಾತ್ರವಿದೆ. ಈ ಪೈಕಿ 10 ದ್ವೀಪಗಳಲ್ಲಿ ಮಾತ್ರ ಜನವಸತಿ ಇದ್ದು, ಕವರಟ್ಟಿ, ಅಗಟ್ಟಿ, ಕಡ್ಮಟ್, ಬಂಗಾರಂ ಹಾಗೂ ತಿನ್ನಕಾರ ದ್ವೀಪಗಳು ಮಾತ್ರ ಪ್ರವಾಸಕ್ಕೆ ಮುಕ್ತವಾಗಿವೆ ಎನ್ನುತ್ತಾರವರು. 

ಒಂದು ವೇಳೆ ಲಕ್ಷದ್ವೀಪವನ್ನೇನಾದರೂ ಪ್ರವಾಸಿ ತಾಣವನ್ನಾಗಿಸಿದರೆ, ಅದರ ಹಣೆಬರಹವು ಲಿಯೊನಾರ್ಡ್ ಡಿ ಕ್ಯಾಪ್ರಿಯೊರ ‘ದಿ ಬೀಚ್’ ಚಿತ್ರದಿಂದ ಪ್ರಸಿದ್ಧವಾಗಿದ್ದ ಥಾಯ್ಲೆಂಡ್ ನ ಮಾಯಾ ತೀರಾದಂತೆಯೇ ಆಗಲಿದೆ ಎಂಬ ಎಚ್ಚರಿಕೆಯನ್ನೂ ಅವರು ನೀಡುತ್ತಾರೆ. ಪ್ರವಾಸಿಗರ ಸ್ನಾರ್ಕೆಲಿಂಗ್, ಡೈವಿಂಗ್ ಹಾಗೂ ಹವಳಗಳನ್ನು ಸ್ಪರ್ಶಿಸುವುದರಿಂದ ಈ ಸಮುದ್ರ ತೀರದ ದರ್ಜೆಯನ್ನು ತಗ್ಗಿಸಲಾಗಿದೆ. 

ಮುಂದಿನ ಒಂದು ದಶಕದಲ್ಲಿ ಭಾರತದ ಪ್ರವಾಸೋದ್ಯಮವು ವಾರ್ಷಿಕ ಶೇ. 7.8ರ ಸರಾಸರಿಯಲ್ಲಿ ಪ್ರಗತಿ ಕಾಣುವ ನಿರೀಕ್ಷೆ ಇದೆ. ಆ ಮೂಲಕ ಪ್ರವಾಸೋದ್ಯಮದ ಜಿಡಿಪಿಯು ಬಹುತೇಕ ರೂ. 33.8 ಶತಕೋಟಿಗೆ ತಲುಪಲಿದೆ. ಇದು ಭಾರತದ ಒಟ್ಟಾರೆ ಆರ್ಥಿಕತೆಯ ಶೇ. 7.2ರಷ್ಟಾಗಲಿದೆ. 

ಆದರೆ, ಭಾರಿ ಪ್ರಮಾಣದ ಪ್ರವಾಸೋದ್ಯಮದಿಂದಾಗಿ ಬೆಲೆಗಳು ಗಗನಮುಖಿಯಾಗಲಿವೆ. ತೀರಾ ಉದ್ದನೆಯ ಸರತಿ ಸಾಲು ನಿರ್ಮಾಣವಾಗಲಿವೆ, ಶಬ್ದ ಮಾಲಿನ್ಯ ಮಿತಿ ಮೀರಲಿದೆ, ವಿಪರೀತ ತ್ಯಾಜ್ಯ ಉತ್ಪಾದನೆಯಾಗಲಿದೆ. ಆ ಮೂಲಕ ಐತಿಹಾಸಿಕ ಪ್ರದೇಶಗಳಲ್ಲಿನ ಪ್ರಕೃತಿಯ ವ್ಯತಿರಿಕ್ತ ಹಾನಿಗೆ ಕಾರಣವಾಗಲಿದೆ ಎಂದೂ ಪ್ರವಾಸೋದ್ಯಮ ತಜ್ಞರು ಎಚ್ಚರಿಕೆ ನೀಡಿದ್ದಾರೆ. 

ಈ ನಡುವೆ ಹವಾಮಾನ ಬದಲಾವಣೆಯೂ ಜಗತ್ತಿನಾದ್ಯಂತ ಪ್ರವಾಸೋದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ವರ್ಷ ಅದಾಗಲೇ ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ಸ್ಕೀ ರೆಸಾರ್ಟ್ಸ್ ನಂತಹ ಹಲವಾರು ಸ್ಕೀ ರೆಸಾರ್ಟ್ಸ್ ಗಳು ಬೆಟ್ಟಗಳ ಮೇಲೆ ಯಾವುದೇ ಮಂಜು ಗಡ್ಡೆ ಇಲ್ಲದಿರುವುದರಿಂದ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. 

ಪ್ರವಾಸೋದ್ಯಮದಿಂದ ಸೃಷ್ಟಿಯಾಗುವ ಪ್ರಯೋಜನಗಳು ಹಾಗೂ ಅವಕಾಶಗಳಿಗಾಗಿ ಅದರ ಬೆಳವಣಿಗೆ ಸ್ವಾಗತಾರ್ಹವಾದರೂ, ಪ್ರಕೃತಿ ಹಾಗೂ ಪ್ರವಾಸೋದ್ಯಮ ಪರಸ್ಪರ ಅವಲಂಬಿತವಾಗಿವೆ ಎಂಬುದನ್ನು ಶೀಘ್ರವಾಗಿ ಮನವರಿಕೆ ಮಾಡಿಕೊಳ್ಳಬೇಕಿದೆ ಹಾಗೂ ಪ್ರವಾಸೋದ್ಯಮ, ಪ್ರಕೃತಿ ಹಾಗೂ ಬಡತನ ನಿವಾರಣೆಯ ನಡುವೆ ಸಕಾರಾತ್ಮಕ ಸಂಬಂಧಗಳನ್ನು ಬಲಗೊಳಿಸುವ ಕೆಲಸಗಳನ್ನು ಮಾಡಬೇಕಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ. 

ಆಧಾರ : ಡೆಕ್ಕನ್ ಹೆರಾಲ್ಡ್

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News