ಗೋಧ್ರಾ ರೈಲು ದಹನಕ್ಕೆ ಕಾರಣರಾದವರನ್ನು ಲಾಲು ಪ್ರಸಾದ್ ರಕ್ಷಿಸಿದರು: ನರೇಂದ್ರ ಮೋದಿ

Update: 2024-05-04 18:42 GMT

ನರೇಂದ್ರ ಮೋದಿ | PC : PTI

ಹೊಸದಿಲ್ಲಿ: ಸೋನಿಯಾ ಮೇಡಂ ಅವರ ಆಡಳಿತದ ಸಂದರ್ಭ 60ಕ್ಕೂ ಅಧಿಕ ಕರ ಸೇವಕರು ಜೀವಂತವಾಗಿ ದಹನವಾಗುವುದಕ್ಕೆ ಕಾರಣರಾದವರನ್ನು ರಕ್ಷಿಸಲು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಪ್ರಯತ್ನಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರೋಪಿಸಿದ್ದಾರೆ.

ಉತ್ತರ ಬಿಹಾರದ ದರ್ಬಾಂಗ್‌ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ತಾನು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಸಂಭವಿಸಿದ ಗೋಧ್ರಾ ಘಟನೆಯನ್ನು ನೆನಪಿಸಿಕೊಂಡರು. ಅಲ್ಲದೆ, ಪ್ರತಿಪಕ್ಷಗಳು ಯಾವಾಗಲೂ ‘ತುಷ್ಟೀಕರಣ’ದ ರಾಜಕೀಯವನ್ನು ಅನುಸರಿಸುತ್ತವೆ ಎಂದು ಆರೋಪಿಸಿದರು.

“ಈ ತುಷ್ಟೀಕರಣದ ರಾಜಕೀಯದಿಂದಲೇ ಲಾಲು ಪ್ರಸಾದ್ ಅವರು ಗೋಧ್ರಾ ರೈಲು ದಹನ ಘಟನೆಗೆ ಕಾರಣರಾದವರನ್ನು ರಕ್ಷಿಸಲು ಪ್ರಯತ್ನಿಸಿದರು. ಅಷ್ಟೇ ಅಲ್ಲದೆ, ಇದು ಸೋನಿಯಾ ಮೇಡಂ ಅವರ ಆಡಳಿತದ ಸಂದರ್ಭ ನಡೆದಿತ್ತು” ಎಂದು ಆಡಳಿತಾರೂಢ ಕಾಂಗ್ರೆಸ್‌ನ ಅಧ್ಯಕ್ಷರೂ ಆಗಿದ್ದ ಆಗಿನ ಯುಪಿಎ ಅಧ್ಯಕ್ಷರನ್ನು ಉಲ್ಲೇಖಿಸಿ ಹೇಳಿದರು.

“ಮೇವು ಹಗರಣದಲ್ಲಿ ಆರೋಪಿಯಾಗಿದ್ದ ಅವರು (ಲಾಲು ಪ್ರಸಾದ್) ಅನಂತರ ರೈಲ್ವೆ ಸಚಿವರಾದರು. ಅವರು ತನಿಖಾ ಸಮಿತಿ ರೂಪಿಸಿದರು. ಅದು ಭೀಕರ ಅಪರಾಧದ ತಪ್ಪಿತಸ್ಥರನ್ನು ದೋಷಮುಕ್ತಿಗೊಳಿಸಿದ ವರದಿ ನೀಡಿತು. ಆದರೆ, ನ್ಯಾಯಾಲಯ ಈ ವರದಿಯನ್ನು ತಿರಸ್ಕರಿಸಿತು’’ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News