37 ಕೋಟಿ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ?: ವರದಿ ನಿರಾಕರಿಸಿದ ಏರ್‌ಟೆಲ್‌

Update: 2024-07-05 10:44 GMT

ಏರ್‌ಟೆಲ್‌ ಇಂಡಿಯಾ | PC : airtel.in

ಹೊಸದಿಲ್ಲಿ: ತನ್ನ ಗ್ರಾಹಕರ ಡೇಟಾ ಸೋರಿಕೆಯಾಗಿದೆ ಎಂಬ ವರದಿಯನ್ನು ಏರ್‌ಟೆಲ್‌ ಇಂಡಿಯಾ ನಿರಾಕರಿಸಿದೆ. ಏರ್‌ಟೆಲ್‌ನ 37.5 ಕೋಟಿ ಭಾರತೀಯ ಗ್ರಾಹಕರ ವೈಯಕ್ತಿಕ ಮಾಹಿತಿ ಹೊಂದಿರುವ ಡೇಟಾವನ್ನು ಜನಪ್ರಿಯ ಹ್ಯಾಕಿಂಗ್‌ ಪ್ಲಾಟ್‌ಫಾರ್ಮ್‌ನಲ್ಲಿ ಹಾಕಲಾಗುವುದು ಎಂದು ಹ್ಯಾಕರ್‌ ಒಬ್ಬ ಹೇಳಿಕೊಂಡ ನಂತರ ಈ ಸ್ಪಷ್ಟೀಕರಣ ಬಂದಿದೆ.

“ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಇಂತಹ ಯಾವುದೇ ಡೇಟಾ ಸೋರಿಕೆಯಾಗಿಲ್ಲ,” ಎಂದು ಏರ್‌ಟೆಲ್‌ ವಕ್ತಾರರು ಹೇಳಿದ್ದಾರೆ.

ಡೇಟಾ ಸೋರಿಕೆ ಕುರಿತು ಡಾರ್ಕ್‌ ವೆಬ್‌ ಇನ್‌ಫಾರ್ಮರ್‌ ಎಂಬ ಎಕ್ಸ್‌ ಹ್ಯಾಂಡಲ್‌ ತಿಳಿಸಿತ್ತು. ಈ ಪೋಸ್ಟ್‌ ಪ್ರಕಾರ “ಕ್ಸೆನ್‌ಝೆನ್”‌ ಆಲಿಯಾಸ್‌ ಹೊಂದಿರುವ ಹ್ಯಾಕರ್‌ ಒಬ್ಬ ಏರ್‌ಟೆಲ್‌ ಇಂಡಿಯಾದ 37.5 ಕೋಟಿ ಗ್ರಾಹಕರ ಡೇಟಾಬೇಸ್‌ ಮಾರಾಟಕ್ಕೆ ಯತ್ನಿಸಿದ್ದಾನೆ. ಈ ಪೋಸ್ಟ್‌ ಪ್ರಕಾರ ಗ್ರಾಹಕರ ಮೊಬೈಲ್‌ ಸಂಖ್ಯೆ, ಜನ್ಮ ದಿನಾಂಕ, ತಂದೆ ಹೆಸರು, ಆಧಾರ್‌ ಐಡಿ, ಇಮೇಲ್‌ ಐಡಿ ಮುಂತಾದ ಮಾಹಿತಿ ಸೋರಿಕೆಯಾಗಿದ್ದು ಕ್ರಿಪ್ಟೋಕರೆನ್ಸಿಯಲ್ಲಿ 50,000 ಅಮೆರಿಕನ್‌ ಡಾಲರ್‌ಗೆ (ರೂ 41 ಲಕ್ಷ) ಮಾರಾಟಕ್ಕೆ ಉದ್ದೇಶಿಸಲಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಡೇಟಾ ಸೋರಿಕೆ ಜೂನ್‌ 2024ರಲ್ಲಿ ಸೋರಿಕೆಯಾಗಿದೆ ಎಂದು ಹೇಳಿಕೊಂಡ ಪೋಸ್ಟ್‌ನಲ್ಲಿ ಡೇಟಾ ಸ್ಯಾಂಪಲ್‌ ಕೂಡ ತೋರಿಸಲಾಗಿದೆ.

2021ರಲ್ಲಿ ಕೂಡ ಇಂತಹುದೇ ಒಂದು ವಿದ್ಯಮಾನದಲ್ಲಿ 25 ಲಕ್ಷ ಏರ್‌ಟೆಲ್‌ ಗ್ರಾಹಕರ ವಿವರಗಳು ರೆಡ್‌ ರಾಬಿಟ್‌ ಟೀಂ ಎಂಬ ಹ್ಯಾಕರ್‌ನ ವೆಬ್‌ಸೈಟ್‌ನಲ್ಲಿ ಅಪ್‌ ಲೋಡ್‌ ಮಾಡಲಾಗಿದೆ ಎಂದು ಸೈಬರ್‌ಭದ್ರತೆ ಸಂಶೋಧಕ ರಾಜಶೇಖರ್‌ ರಾಜಹರಿಯಾ ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News