ಸ್ಥಳೀಯ ಸಮಸ್ಯೆಗಳನ್ನು ಹೈಕೋರ್ಟ್ಗಳೇ ನಿರ್ವಹಿಸುವುದು ಒಳಿತು: ಸುಪ್ರೀಂಕೋರ್ಟ್

Update: 2023-10-10 18:26 GMT

ಸುಪ್ರೀಂಕೋರ್ಟ್ | Photo: PTI 

ಹೊಸದಿಲ್ಲಿ: ದೇಶದಲ್ಲಿ ಗಮನಹರಿಸಬೇಕಾದಂತಹ ಅನೇಕ ಸಮಸ್ಯೆಗಳಿದ್ದರೂ, ಅವೆಲ್ಲವನ್ನೂ ಆಲಿಸುವ ಮೂಲಕ ತಾನು ನಿಷ್ಕ್ರಿಯವಾಗಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ. ಆಡಳಿತಕ್ಕೆ ಸಂಬಂಧಿಸಿದ ಪ್ರತಿಯೊಂದು ಸೂಕ್ಷ್ಮ ವಿಷಯಗಳನ್ನು ತನಗೆ ನಿರ್ವಹಿಸಲು ಸಾಧ್ಯವಿಲ್ಲ.

ಸ್ಥಳೀಯ ಸಮಸ್ಯೆಗಳ ವಿಚಾರಣೆಯನ್ನು ಹೈಕೋರ್ಟ್ ಗಳೇ ನಿರ್ವಹಿಸುವುದು ಒಳಿತು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ. ಕೇರಳದಲ್ಲಿ ಸೆರೆಹಿಡಿಯಲಾದ ಆನೆಗಳ ಸಾವನ್ನಪ್ಪುತ್ತಿರುವುದನ್ನು ತಡೆಯಲು ಮಧ್ಯಪ್ರವೇಶಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಸಲ್ಲಿಸಲಾದ ಅರ್ಜಿಯ ಆಲಿಕೆ ವೇಳೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ. ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳಿಗೆ ಸಂಬಂಧಿಸಿ ಮಧ್ಯಪ್ರವೇಶ ಕೋರುವ ಅರ್ಜಿಗಳ ಸಂಖ್ಯೆ ಆಲಿಕೆ ಹೆಚ್ಚುತ್ತಲೇ ಹೋಗುತ್ತಿರುವ ಬಗ್ಗೆ ಚಂದ್ರಚೂಡ ಅವರು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಸುಪ್ರೀಂಕೋರ್ಟ್ ನ ಪಾತ್ರವೇನೆಂಬುದರ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದರು. ಬಂಧಿತ ಆನೆಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸುವ ಬದಲು ಸುಪ್ರೀಂಕೋರ್ಟ್ ನ ಮೆಟ್ಟಲೇರಿದ ಔಚಿತ್ಯವೇನು ಎಂದವರು ಅರ್ಜಿದಾರ ಪರ ವಕೀಲ ಸಿ.ಯು.ಸಿಂಗ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಂಗ್ ಅವರು, ಈ ವಿಷಯಕ್ಕೆ ಸಂಬಂಧಿಸಿದ ಅರ್ಜಿಗಳ ಸಮೂಹವು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿಯುಳಿದಿದೆ ಎಂದರು.

2018 ಹಾಗೂ 2022ರ ಮಧ್ಯದ ಅವಧಿಯಲ್ಲಿ 135 ಆನೆಗಳು ಮೃತಪಟ್ಟಿರುವುದಾಗಿ ಅವರು ಹೇಳಿದರು. ಅದಕ್ಕೆ ಉತ್ತರಿಸಿದ ಚಂದ್ರಚೂಡ ಅವರು ‘‘ಹೈಕೋರ್ಟ್ ನಲ್ಲಿ ಇಂತಹ ಪ್ರಕರಣದ ವಿಚಾರಣೆ ನಡೆಸಬಲ್ಲಂತಹ ಅನುಭವಿ ನ್ಯಾಯಾಧೀಶರುಗಳಿದ್ದಾರೆ. ಸುಪ್ರೀಂಕೋರ್ಟ್ ನಿಷ್ಕ್ರಿಯವಾಗುವಂತೆ ಮಾಡಲು ಪ್ರತಿಯೊಂದನ್ನು ಇಲ್ಲಿಗೆ ತರುವ ಅಗತ್ಯವಿಲ್ಲ’’ ಎಂದು ಅಸಮಾಧಾನ ವ್ಯಕ್ತಪಡಿಸಿದರೆಂದು ಬಾರ್ ಆ್ಯಂಡ್ ಬೆಂಚ್ ವರದಿ ಮಾಡಿದೆ. ಆದಾಗ್ಯೂ, ಪ್ರಕರಣಕ್ಕೆ ಸಂಬಂಧಿಸಿದ ಮುಖ್ಯ ಅರ್ಜಿು ನ್ಯಾಯಪೀಠದ ಮುಂದೆ ಬಂದಾಗ ಈ ಅರ್ಜಿಯ ಆಲಿಕೆಯನ್ನು ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. ಮುಂದಿನ ಆಲಿಕೆಯನ್ನು ಅದು ಡಿಸೆಂಬರ್ ಮೊದಲ ವಾರಕ್ಕೆ ನಿಗದಿಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News