ಲೋಕಸಭಾ ಚುನಾವಣೆ | ನಾಲ್ಕನೇ ಹಂತದಲ್ಲಿ 10 ರಾಜ್ಯಗಳಲ್ಲಿ ಶೇ.62.3ರಷ್ಟು ಮತದಾನ

Update: 2024-05-13 16:09 GMT

PC: PTI 

ಹೊಸದಿಲ್ಲಿ : ಲೋಕಸಭಾ ಚುನಾವಣೆಗಳ ನಾಲ್ಕನೇ ಹಂತದಲ್ಲಿ ಸೋಮವಾರ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಒಟ್ಟು 1,717 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸಂಜೆ ಐದು ಗಂಟೆಗೆ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.62.3ರಷ್ಟು ಮತದಾನವಾಗಿದೆ. ತೆಲಂಗಾಣದ 17, ಆಂಧ್ರಪ್ರದೇಶದ ಎಲ್ಲ 25,ಉತ್ತರ ಪ್ರದೇಶದ 13,ಬಿಹಾರದ ಐದು,ಜಾರ್ಖಂಡ್ನ ನಾಲ್ಕು,ಮಧ್ಯಪ್ರದೇಶದ ಎಂಟು,ಮಹಾರಾಷ್ಟ್ರದ 11,ಒಡಿಶಾದ ನಾಲ್ಕು,ಪಶ್ಚಿಮ ಬಂಗಾಳದ ಎಂಟು ಮತ್ತು ಜಮ್ಮು-ಕಾಶ್ಮೀರದ ಒಂದು ಸ್ಥಾನಗಳಿಗೆ ಮತದಾನ ನಡೆದಿದೆ.

ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ನಡೆದ ಮತದಾನವು 2019 ಆಗಸ್ಟ್ ನಲ್ಲಿ ಸಂವಿಧಾನದ ವಿಧಿ 370 ರದ್ದತಿಯ ಬಳಿಕ ಕಾಶ್ಮೀರದಲ್ಲಿ ಮೊದಲ ಪ್ರಮುಖ ಚುನಾವಣೆಯಾಗಿದೆ.

ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ ಎಲ್ಲ 175 ಮತ್ತು ಒಡಿಶಾದ 28 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿದೆ.

ಈ ಸುತ್ತಿನಲ್ಲಿ 17.70 ಕೋ.ಗೂ ಅಧಿಕ ಅರ್ಹ ಮತದಾರರಿಗಾಗಿ 1.92 ಲಕ್ಷ ಮತಗಟ್ಟೆಗಳಲ್ಲಿ 19 ಲಕ್ಷ ಕ್ಕೂ ಅಧಿಕ ಚುನಾವಣಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಎಸ್ಪಿ ವರಿಷ್ಠ ಅಖಿಲೇಶ್ ಯಾದವ್, ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ, ಎಐಎಂಐಎಂ ವರಿಷ್ಠ ಅಸದುದ್ದೀನ್ ಉವೈಸಿ,ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ, ಮಾಜಿ ಕ್ರಿಕೆಟಿಗ ಟಿಎಂಸಿಯ ಯೂಸುಫ್ ಪಠಾಣ್, ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಕಣದಲ್ಲಿದ್ದ ಪ್ರಮುಖ ಅಭ್ಯರ್ಥಿಗಳು.

ಪಶ್ಚಿಮ ಬಂಗಾಳ, ಆಂಧ್ರಪ್ರದೇಶದಲ್ಲಿ ಘರ್ಷಣೆ:

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿದ್ದರೆ, ಆಂಧ್ರಪ್ರದೇಶದಲ್ಲಿ ವೈಎಸ್ಆರ್ಸಿಪಿ ಮತ್ತು ಟಿಡಿಪಿ ಕಾರ್ಯಕರ್ತರ ನಡುವೆ ಹೊಯ್ ಕೈ ನಡೆದಿದ್ದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News