ಲೋಕಸಭೆ ಚುನಾವಣೆ | ಆಂಧ್ರಪ್ರದೇಶದಲ್ಲಿ ಮತದಾನದ ಸಂದರ್ಭ ಹಿಂಸಾಚಾರ
ವಿಜಯವಾಡ : ಟಿಡಿಪಿ ಹಾಗೂ ವೈಎಸ್‌ಆರ್‌ಸಿ ಕಾರ್ಯಕರ್ತರ ನಡುವಿನ ಘರ್ಷಣೆಯಿಂದಾಗಿ ಮಾಚೆರ್ಲ ಕ್ಷೇತ್ರದ ರೆಂಟಾಲಾ ಹಾಗೂ ಪಾಲನಾಡು ಜಿಲ್ಲೆಯ ಗುರಜಾಲಾದಲ್ಲಿ ಉದ್ವಿಗ್ನತೆ ಉಂಟಾಯಿತು.
ಪ್ರತಿಯೊಬ್ಬರು ಕಲ್ಲು ಹಾಗೂ ದೊಣ್ಣೆಗಳಿಂದ ದಾಳಿ ನಡೆಸುವ ಮೂಲಕ ಎರಡೂ ಗುಂಪುಗಳು ಪರಸ್ಪರ ಘರ್ಷಣೆಯಲ್ಲಿ ತೊಡಗಿದವು. ಈ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡರು ಎಂದು ವರದಿಯಾಗಿದೆ. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದರು ಹಾಗೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಪರಿಸ್ಥಿತಿಯ ಗಂಭೀರತೆಯನ್ನು ಗಣನೆಗೆ ತೆಗೆದುಕೊಂಡ ಭಾರತೀಯ ಚುನಾವಣಾ ಆಯೋಗ ರೆಂಟಾಲಾ ಹಾಗೂ ಪಾಲನಾಡುವಿನ ಇತರ ಸ್ಥಳಗಳಿಗೆ ಹೆಚ್ಚುವರಿ ಪಡೆಯನ್ನು ಕೂಡಲೇ ಕಳುಹಿಸುವಂತೆ ಹಾಗೂ ಚುನಾವಣೆ ಸುಗಮವಾಗಿ ನಡೆಯುವ ಖಾತರಿ ನೀಡುವಂತೆ ಮುಖ್ಯ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿತು.
ಇವಿಎಂಗೆ ಹಾನಿ ಮಾಡಿದ ದುಷ್ಕರ್ಮಿಗಳು
ಅನ್ನಮಯ್ಯ ಜಿಲ್ಲೆಯ ಪುಲ್ಲಂಪೇಟದಲ್ಲಿ ಅಪರಿಚಿತ ದುಷ್ಕರ್ಮಿಗಳು ಮತಗಟ್ಟೆಗೆ ನುಗ್ಗಿ ಇವಿಎಂಗಳಿಗೆ ಹಾನಿ ಉಂಟು ಮಾಡಿದರು. ಮತದಾರರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ ಹಾಗೂ ಇವಿಎಂಗಳಿಗೆ ಹಾನಿ ಉಂಟು ಮಾಡಿದ ಬಳಿಕ ಪ್ರಕಾಶಂ ಜಿಲ್ಲೆಯ ದರ್ಶಿ ವಿಧಾನ ಸಭಾ ಕ್ಷೇತ್ರದ ಬೊಟ್ಲಪಾಲೆಂ ಗ್ರಾಮದಲ್ಲಿ ಕೆಲವು ಕಾಲ ಉದ್ವಿಗ್ನತೆ ಸೃಷ್ಟಿಯಾಯಿತು.
ಚುನಾವಣಾ ಅಧಿಕಾರಿಗಳು ಪರ್ಯಾಯ ಇವಿಎಂಗಳ ವ್ಯವಸ್ಥೆ ಮಾಡಿದರು ಹಾಗೂ ಮತದಾನದ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಿದರು. ಹಿಂಸಾಚಾರದ ಘಟನೆಗಳಿಗೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಪ್ರಕಾಶಂ ಜಿಲ್ಲಾ ಚುನಾವಣಾಧಿಕಾರಿ ಎ.ಎಸ್. ದಿನೇಶ್ ಕುಮಾರ್ ತಿಳಿಸಿದರು. ಅನಂತರ ಯಾವುದೇ ರೀತಿಯ ಉದ್ವಿಗ್ನತೆ ಉಂಟಾಗದಂತೆ ಸ್ಥಳದಲ್ಲಿ ಕೇಂದ್ರ ಶಸಸ್ತ್ರ ಪಡೆಗಳನ್ನು ನಿಯೋಜಿಲಾಯಿತು.
ಉಪ ಮುಖ್ಯಮಂತ್ರಿ-ಟಿಡಿಪಿ ಶಾಸಕನ ನಡುವೆ ಘರ್ಷಣೆ
ಉಪ ಮುಖ್ಯಮಂತ್ರಿ ಕೆ. ನಾರಾಯಣ ಸ್ವಾಮಿ ಹಾಗೂ ಟಿಡಿಪಿ ಶಾಸಕ ಸ್ಥಾನದ ಅಭ್ಯರ್ಥಿ ಥಾಮಸ್ ನಡುವಿನ ಘರ್ಷಣೆಯ ಹಿನ್ನೆಲೆಯಲ್ಲಿ ಚಿತ್ತೂರು ಜಿಲ್ಲೆಯ ಕರವೇಟಿನಗಾರಮ್‌ನ ಅನ್ನಾರು ಗ್ರಾಮದಲ್ಲಿ ಕೆಲವು ಸಮಯ ಉದ್ವಿಗ್ನತೆಯ ವಾತಾವರಣ ಸೃಷ್ಟಿಯಾಯಿತು.
ಅಮ್ದಾಲವಾಲಸಾ ವಿಧಾನ ಸಭಾ ಕ್ಷೇತ್ರದ ಪೊಂಡೂರು ಮಂಡಲ್‌ನ ಗೋಕರ್ಣಪಲ್ಲೆಯಲ್ಲಿ ಟಿಡಿಪಿ ಹಾಗೂ ವೈಎಸ್‌ಆರ್‌ಸಿ ಕಾರ್ಯಕರ್ತರ ನಡುವೆ ಘಷಣೆ ನಡೆಯಿತು. ಇದರಿಂದ ಇಬ್ಬರು ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಶ್ರೀಕಾಕುಲಂನಲ್ಲಿರುವ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ವೈಎಸ್‌ಆರ್‌ಸಿ ಅಭ್ಯರ್ಥಿ ತಮ್ಮಿನೇನಿ ಸೀತಾರಾಮ್ ಅವರ ಪತ್ನಿ ತಮ್ಮಿನೇನಿ ವಾಣಿ ಅವರು ಸಾಮಾನ್ಯ ಏಜೆಂಟ್ ಆಗಿ ಮತಗಟ್ಟೆ ಪ್ರವೇಶಿಸಿದ್ದರು. ಇದಕ್ಕೆ ಟಿಡಿಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಇನ್ನೊಂದೆಡೆ ಪುಂಗನೂರು ವಿಧಾನ ಸಭಾ ಕ್ಷೇತ್ರದ ಸದ್ದುಂ ಮಂಡಲ್‌ನ ಬೋರಕಮಂಡ ಗ್ರಾಮದಿಂದ ಟಿಡಿಪಿಯ ಮೂವರು ಮತದಾನದ ಏಜೆಂಟ್‌ರನ್ನು ವೈಎಸ್‌ಆರ್‌ಸಿ ಕಾರ್ಯಕರ್ತರು ಸೋಮವಾರ ಬೆಳಗ್ಗೆ ಮತದಾನ ಆರಂಭವಾಗುವ ಮುನ್ನ ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಕೂಡಲೇ ಪೊಲೀಸರು ಅವರನ್ನು ಪಿಲೇರುವಿನಲ್ಲಿ ಪತ್ತೆ ಮಾಡಿದರು ಹಾಗೂ ಬೊರಕಾಮಂಡಕ್ಕೆ ಹಿಂದೆ ಕರೆದುಕೊಂಡು ಬಂದರು.
ಟಿಡಿಪಿಯ ಜಿಲ್ಲಾ ಉಸ್ತುವಾರಿ ಜಗನ್ ಮೋಹನ್ ರಾಜು ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.