ಲೋಕಸಭಾ ಚುನಾವಣೆ | ಸಾರ್ವಜನಿಕ ಪ್ರಚಾರ ಸಭೆಗಳಿಗೆ ಸಂವಿಧಾನದ ಪ್ರತಿಯನ್ನು ಕೊಂಡೊಯ್ಯುವಂತೆ ಅಭ್ಯರ್ಥಿಗಳಿಗೆ ರಾಹುಲ್ ಗಾಂಧಿ ಸೂಚನೆ
ಹೊಸದಿಲ್ಲಿ : ನಾಮಪತ್ರ ಸಲ್ಲಿಕೆ, ಸಾರ್ವಜನಿಕ ಸಭೆಗಳು ಮತ್ತು ಜನಸಂಪರ್ಕ ಕಾರ್ಯಕ್ರಮಗಳ ಸಮಯದಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ತಮ್ಮೊಂದಿಗೆ ಸಂವಿಧಾನದ ಪ್ರತಿಯನ್ನು ಕೊಂಡೊಯ್ಯಬೇಕು. ಕಾಂಗ್ರೆಸ್ ಇರುವವರೆಗೂ ಬಿಜೆಪಿ ಮಾತ್ರವಲ್ಲ, ಯಾರಿಗೂ ಸಂವಿಧಾನವನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಜನರಿಗೆ ತಿಳಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗಾಗಲೇ ತಮ್ಮ ಸಾರ್ವಜನಿಕ ಸಭೆಗಳಲ್ಲಿ ಸಂವಿಧಾನದ ಪ್ರತಿಯನ್ನು ಒಯ್ಯುತ್ತಿದ್ದಾರೆ. ಅವರು ಸೋಮವಾರ ಗುಜರಾತ್ನ ಪಟಾನ್ ಮತ್ತು ಛತ್ತೀಸ್ಗಢದ ಬಿಲಾಸ್ಪುರದಲ್ಲಿ ಮತ್ತು ಮಂಗಳವಾರ ಮಧ್ಯಪ್ರದೇಶದ ಭಿಂಡ್ನಲ್ಲಿ ನಡೆದ ರ‍್ಯಾಲಿಯಲ್ಲೂ ಸಂವಿಧಾನದ ಪ್ರತಿಯನ್ನು ತಮ್ಮೊಂದಿಗೆ ಕೊಂಡೊಯ್ದಿದಿದ್ದರು.
"ಬಡವರಿಗೆ ವರದಾನ, ವಂಚಿತರಿಗೆ ಗೌರವ ಮತ್ತು ಪ್ರತಿಯೊಬ್ಬ ನಾಗರಿಕನ ಹೆಮ್ಮೆ - ನಮ್ಮ ಸಂವಿಧಾನ! ನಾಮಪತ್ರ ಸಲ್ಲಿಕೆ, ಸಾರ್ವಜನಿಕ ಸಭೆಗಳು ಮತ್ತು ಜನಸಂಪರ್ಕ ಕಾರ್ಯಕ್ರಮಗಳ ಸಮಯದಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ತಮ್ಮೊಂದಿಗೆ ಸಂವಿಧಾನದ ಪ್ರತಿಯನ್ನು ಕೊಂಡೊಯ್ಯಬೇಕು. ಕಾಂಗ್ರೆಸ್ ಇರುವವರೆಗೂ ಬಿಜೆಪಿ ಮಾತ್ರವಲ್ಲ, ಯಾರಿಗೂ ಸಂವಿಧಾನವನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಜನರಿಗೆ ತಿಳಿಸಿ ನಾನು ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ನಾಯಕರನ್ನು ವಿನಂತಿಸುತ್ತೇನೆ ”ಎಂದು ಗಾಂಧಿ ಹಿಂದಿಯಲ್ಲಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಕಾಂಗ್ರೆಸ್ ಇರುವವರೆಗೆ, ಬಿಜೆಪಿ ಸೇರಿದಂತೆ, ಪ್ರಪಂಚದ ಯಾವುದೇ ಶಕ್ತಿಗೆ ಭಾರತದ ಸಂವಿಧಾನವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿ ಹಳ್ಳಿ ಮತ್ತು ಪ್ರತಿ ಬೀದಿಯಲ್ಲಿ ಘೋಷಿಸಿ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಎಕ್ಸ್ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಇಂದೂ ಕೂಡ ರಾಹುಲ್ ಗಾಂಧಿ ಮಧ್ಯಪ್ರದೇಶದಲ್ಲಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದೊಂದಿಗೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಚುನಾವಣೆಯು ಸಂವಿಧಾನವನ್ನು ಉಳಿಸುವವರು ಮತ್ತು ಅದನ್ನು ನಾಶಪಡಿಸುವವರ ನಡುವಿನ ಚುನಾವಣೆಯಾಗಿದೆ. ಇದು ನಮ್ಮ ಜೀವಿತಾವಧಿಯ ಅತ್ಯಂತ ಪ್ರಮುಖ ಚುನಾವಣೆ” ಎಂದು ಹೇಳಿದ್ದಾರೆ.
ಆರೆಸ್ಸೆಸ್ ನ ಅಜೆಂಡಾದಂತೆ ಸಂವಿಧಾನವನ್ನು ತಿದ್ದುಪಡಿ ಮಾಡಲು ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಿಜೆಪಿಯು 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಯಸುತ್ತದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.
गरीबों के लिए वरदान, वंचितों का सम्मान और हर नागरिक का अभिमान - हमारा संविधान!
— Rahul Gandhi (@RahulGandhi) April 30, 2024
कांग्रेस के सभी प्रत्याशियों और नेताओं से मेरा निवेदन है कि वह नामांकन, सभाओं, भाषणों और जनसंपर्क के दौरान पवित्र संविधान को अपने साथ ज़रूर रखें।
गांव-गांव, गली-गली यह ऐलान कर दो कि जब तक कांग्रेस है… pic.twitter.com/fYLIznleu6