ಲೋಕಸಭಾ ಚುನಾವಣೆ: ಸ್ಥಳೀಯ ಬಿಜೆಪಿ ನಾಯಕರಿಂದ ನಟಿ ಕಂಗನಾ ರಣಾವತ್‌ಗೆ ಸಂಕಷ್ಟ

Update: 2024-03-30 09:18 GMT

ಕಂಗನಾ ರಣಾವತ್‌ 

ಹೊಸದಿಲ್ಲಿ: ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರ ಚುನಾವಣಾ ಭವಿಷ್ಯಕ್ಕೆ ಸಂಕಷ್ಟ ಎದುರಾಗಿದೆ. ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಮಂಡಿ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ.

ಮೂವರು ಸ್ಥಳೀಯ ಬಿಜೆಪಿ ನಾಯಕರು ಪಕ್ಷದ ಇತರ ಐವರು ನಾಯಕರೊಂದಿಗೆ ಪಂಡೋಹ್‌ನಲ್ಲಿ ಇತ್ತೀಚಿಗೆ ಸಭೆ ನಡೆಸಿದ್ದು, ಇದು ರಣಾವತ್ ಅವರ ಚುನಾವಣಾ ಭವಿಷ್ಯದ ಮೇಲೆ ಕರಿನೆರಳು ಬೀರಿದೆ.

ಮಾಜಿ ಬಿಜೆಪಿ ಸಂಸದ ಮಹೇಶ್ವರ ಸಿಂಗ್ ಅವರ ಪುತ್ರ ಹಿತೇಶ್ವರ ಸಿಂಗ್, ಮಾಜಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಸಿಂಗ್ ಮತ್ತು ಮಾಜಿ ಅನ್ನಿ ಶಾಸಕ ಕಿಶೋರಿಲಾಲ ಸಾಗರ ಅವರಿಗೆ 2022ರ ವಿಧಾನಸಭಾ ಚುನಾವಣೆಗಳಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದ ಈ ಮೂವರೂ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಮಾಜಿ ಮುಖ್ಯಮಂತ್ರಿ ಜೈರಾಮ ಠಾಕೂರ್ ಅವರು ಮಾ.26ರಂದು ಕುಲುಗೆ ಭೇಟಿ ನೀಡಿ ಮಹೇಶ್ವರ ಸಿಂಗ್ ಅವರನ್ನು ಸಮಾಧಾನಿಸಲು ಯತ್ನಿಸಿದ್ದರು. ಅದರ ಮರುದಿನವೇ ಸಿಂಗ್ ಪುತ್ರ ಹಿತೇಶ್ವರ ಎಂಟು ಅತೃಪ್ತ ಬಿಜೆಪಿ ನಾಯಕರೊಂದಿಗೆ ಸೇರಿಕೊಂಡು ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ತೊಡಗಿಕೊಂಡಿದ್ದರು. ವಿಧಾನಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಲ್ಪಟ್ಟ ಬಳಿಕ ಬಿಜೆಪಿಯಿಂದ ದೂರ ಸರಿದಿದ್ದ ರಾಮ ಸಿಂಗ್,‌ ರಾಜ್ಯ ಬಿಜೆಪಿ ನಾಯಕತ್ವವು ಕಾಂಗ್ರೆಸ್ ನಾಯಕರನ್ನು ಅಪ್ಪಿಕೊಳ್ಳುತ್ತಿದೆ,ಆದರೆ ಜೀವಮಾನವಿಡೀ ಪಕ್ಷಕ್ಕಾಗಿ ದುಡಿದರವರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದರು.

ಈಗ ಜಿಲ್ಲೆಯ ಮೂವರು ನಾಯಕರು ಮಂಡಿಯ ಇತರ ಐವರೊಂದಿಗೆ ಒಂದೇ ವೇದಿಕೆಯಲ್ಲಿ ಒಟ್ಟಾಗಿದ್ದಾರೆ ಮತ್ತು ಇದು ಮಂಡಿ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಕಿತ್ತುಕೊಳ್ಳುವ ಬಿಜೆಪಿಯ ಯೋಜನೆಗಳನ್ನು ಬುಡಮೇಲುಗೊಳಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಅತ್ತ ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮಿತ್ರಪಕ್ಷ ಶಾಸಕ ಬಚ್ಚು ಕಡು ನೇತೃತ್ವದ ಪ್ರಹಾರ ಜನಶಕ್ತಿ ಪಕ್ಷ (ಪಿಜೆಪಿ) ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಇದರೊಂದಿಗೆ ನವನೀತ್ ರಾಣಾ (ಬಿಜೆಪಿ),ಬಲವಂತ ವಾಂಖೆಡೆ (ಕಾಂಗ್ರೆಸ್) ಮತ್ತು ದಿನೇಶ ಬೂಬ್ (ಪಿಜೆಪಿ) ಅವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಪಿಜೆಪಿ ಪದಾಧಿಕಾರಿಗಳು ಶುಕ್ರವಾರ ಅವಸರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಬೂಬ್ ಉಮೇದುವಾರಿಕೆಯನ್ನು ಪ್ರಕಟಿಸಿದ್ದಾರೆ.

ತನ್ನ ಪಕ್ಷದ ಅಭ್ಯರ್ಥಿಯನ್ನು ಹಿಂದೆಗೆದುಕೊಳ್ಳಲು ನಿರಾಕರಿಸಿರುವ ಕಡು, ಅಗತ್ಯವಾದರೆ ಎನ್‌ಡಿಎ ಜೊತೆ ಸಂಬಂಧಗಳನ್ನು ಕಡಿದುಕೊಳ್ಳಲೂ ಸಿದ್ಧರಾಗಿದ್ದಾರೆ. ಶಿವಸೇನೆ (ಶಿಂದೆ ಬಣ) ನಾಯಕ ಹಾಗೂ ಮಾಜಿ ಶಾಸಕ ಅಭಿಜಿತ ಅಡ್ಸುಲ್ ಮತ್ತು ಅವರ ತಂದೆ,ಅಮರಾವತಿಯ ಮಾಜಿ ಸಂಸದ ಆನಂದರಾವ ಅಡ್ಸುಲ್ ಅವರು ರಾಣಾರ ಉಮೇದುವಾರಿಕೆಯ ಬಗ್ಗೆ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಭಿಜಿತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬೆದರಿಕೆಯನ್ನೂ ಒಡ್ಡಿದ್ದಾರೆ.

2019ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ರಾಣಾ ಬಳಿಕ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. ರಾಣಾರ ಜಾತಿ ಪ್ರಮಾಣಪತ್ರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದರೂ ಅವರನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿರುವ ಆಡಳಿತಾರೂಢ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದೆ. ಅಮರಾವತಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮೂವರು ಮತ್ತು ಪಿಜೆಪಿ ಇಬ್ಬರು ಶಾಸಕರನ್ನು ಹೊಂದಿದ್ದರೆ,ಬಿಜೆಪಿ ಕೇವಲ ಓರ್ವ ಶಾಸಕರನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News