ಲೋಕಸಭಾ ಚುನಾವಣೆ : ಸುನಿಲ ಕುನುಗೋಲು ಕಾಂಗ್ರೆಸ್ ಪ್ರಚಾರ ತಂಡದಿಂದ ಹೊರಕ್ಕೆ
ಹೊಸದಿಲ್ಲಿ: ಪ್ರಶಾಂತ ಕಿಶೋರ ನಿರ್ಗಮನದ ಬಳಿಕ ಈಗ ಕಾಂಗ್ರೆಸ್ ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಗೆಲುವಿನ ರೂವಾರಿಯಾಗಿದ್ದ ಚುನಾವಣಾ ತಂತ್ರಜ್ಞ ಸುನಿಲ ಕುನುಗೋಲು ಅವರನ್ನು ಮುಂಬರುವ ಲೋಕಸಭಾ ಚುನಾವಣೆಗೆ ತನ್ನ ಪ್ರಚಾರ ತಂಡದಿಂದ ಕೈಬಿಟ್ಟಿದೆ. ಮಾಧ್ಯಮ ವರದಿಗಳಂತೆ ಲೋಕಸಭಾ ಚುನಾವಣೆಗಳ ಮೇಲೆ ಗಮನ ಕೇಂದ್ರೀಕರಿಸುವ ಬದಲು ಹರ್ಯಾಣ ಮತ್ತು ಮಹಾರಾಷ್ಟ್ರಗಳಲ್ಲಿ ಪಕ್ಷದ ಪ್ರಚಾರಕ್ಕೆ ಅವರನ್ನು ನಿಯೋಜಿಸಲಾಗಿದೆ.
ಎರಡು ವರ್ಷಗಳ ಹಿಂದೆ ಪ್ರಶಾಂತ್ ಕಿಶೋರ್ ನಿರ್ಗಮನದ ಬಳಿಕ ಕುನುಗೋಲು ಕಾಂಗ್ರೆಸ್ ನ ಸಾರ್ವತ್ರಿಕ ಚುನಾವಣೆಗಳ ಸಿದ್ಧತೆಗಳಲ್ಲಿ ಭಾಗಿಯಾಗದ ಎರಡನೇ ಪ್ರಮುಖ ಚುನಾವಣಾ ತಂತ್ರಜ್ಞರಾಗಿದ್ದಾರೆ.
ಮಾಧ್ಯಮ ವರದಿಗಳಂತೆ ಈ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹರ್ಯಾಣ ಮತ್ತು ಮಹಾರಾಷ್ಟ್ರಗಳಲ್ಲಿ ಕುನುಗೋಲು ಅವರ ತಂಡಗಳು ಈಗಾಗಲೇ ಸಕ್ರಿಯವಾಗಿರುವುದು ಅವರ ಮರುನಿಯೋಜನೆಯ ಕಾಂಗ್ರೆಸ್ ನಿರ್ಧಾರಕ್ಕೆ ಕಾರಣವಾಗಿದೆ. ಈ ರಾಜ್ಯಗಳಲ್ಲಿ ಆಡಳಿತಾರೂಢ ಬಿಜೆಪಿಯ ವಿರುದ್ಧ ಭಾರೀ ಗೆಲುವುಗಳನ್ನು ದಾಖಲಿಸಲು ಕಾಂಗ್ರೆಸ್ ಉತ್ಸುಕವಾಗಿದೆ ಎನ್ನುವುದು ಈ ನಿರ್ಧಾರದಿಂದ ಸ್ಪಷ್ಟವಾಗಿದೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ಹಿರಿಯ ಕಾಂಗ್ರೆಸ್ ನಾಯಕರೋರ್ವರು, ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕುನುಗೋಲು ಅನುಪಸ್ಥಿತಿ ಪಕ್ಷಕ್ಕೆ ‘ಕೊಂಚ ಹಿನ್ನಡೆ’ಯನ್ನುಂಟು ಮಾಡಬಹುದು ಎಂದು ಒಪ್ಪಿಕೊಂಡರಾದರೂ, ಬಿಜೆಪಿಯಿಂದ ಪ್ರಮುಖ ರಾಜ್ಯಗಳನ್ನು ಕಿತ್ತುಕೊಳ್ಳಲು ಕುನುಗೋಲು ತನ್ನ ‘ಮಾಂತ್ರಿಕ ಶಕ್ತಿ’ಯನ್ನು ಬಳಸಿದರೆ ಇನ್ನಷ್ಟು ದೀರ್ಘಾವಧಿಯ ಲಾಭವಿದೆ ಎನ್ನುವುದು ಕಾಂಗ್ರೆಸ್ ನ ನಂಬಿಕೆಯಾಗಿದೆ ಎಂದು ಹೇಳಿದರು.
ಕುನುಗೋಲು ಕರ್ನಾಟಕ ಮತ್ತು ತೆಲಂಗಾಣಗಳಲ್ಲಿಯ ಕಾಂಗ್ರೆಸ್ ಸರಕಾರಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.