ಮಧ್ಯಪ್ರದೇಶ | ದಲಿತ ಬಾಲಕನ ಮೇಲೆ ಹಲ್ಲೆ ನಡೆಸಿ ಅವಮಾನಿಸಿ ವೀಡಿಯೊ ಚಿತ್ರೀಕರಣ : 5 ಮಂದಿಯ ವಿರುದ್ಧ ಪ್ರಕರಣ ದಾಖಲು
ಶಹದೋಲ್ : 17 ವರ್ಷದ ದಲಿತ ಬಾಲಕನ ಮೇಲೆ ಹಲ್ಲೆ ನಡೆಸಿ, ಆತನಿಗೆ ಅವಮಾನಕಾರಿಯಾಗಿ ನಟನೆ ಮಾಡಲು ಒತ್ತಡ ಹೇರಿದ ಆರೋಪದ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ 5 ಮಂದಿಯ ವಿರುದ್ಧ ಶನಿವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕನಿಂದ ಸ್ಥಳೀಯವಾಗಿ ‘ಮುರ್ಗಾ ಬನಾನಾ’ ಎಂದು ಕರೆಯಲಾಗುವ ನಟನೆ ಮಾಡಿಸಲಾಗಿದ್ದು, ಅದರೊಂದಿಗೆ ಕಾಗೆಯಂತೆ ಕೂಗುವ ಶಿಕ್ಷೆಯನ್ನೂ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೊತ್ವಾಲಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಘವೇಂದ್ರ ತಿವಾರಿ, “ಸಂತ್ರಸ್ತ ಬಾಲಕನ್ನು ಅವಮಾನಿಸಿ ವಿಡಿಯೊ ಚಿತ್ರೀಕರಣ ಮಾಡಿರುವ ಆರೋಪಿಗಳು, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಆಗಸ್ಟ್ 25ರಂದು ಹಳೆಯ ವೈಷಮ್ಯದ ಕಾರಣಕ್ಕೆ ತಮಗೆ ಪರಿಚಯವಿರುವ ಸಂತ್ರಸ್ತ ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿರುವ ಆರೋಪಿಗಳು, ಈ ರೀತಿ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರನ್ನು ಶೀಘ್ರ ಬಂಧಿಸಲಾಗುವುದು ಎಂದು ಹೇಳಿದ್ದಾರೆ.