ಆರೆಸ್ಸೆಸ್ ನಾಯಕರ ಪುಸ್ತಕಗಳ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯ ಜ್ಞಾನವನ್ನು ಬೋಧಿಸುವಂತೆ ಕಾಲೇಜುಗಳಿಗೆ ಮಧ್ಯಪ್ರದೇಶ ಸರಕಾರದ ಸೂಚನೆ
ಭೋಪಾಲ: ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಭಾರತೀಯ ಜ್ಞಾನ ಪರಂಪರೆಯ ಬಗ್ಗೆ ಬೋಧಿಸುವಂತೆ ಮಧ್ಯಪ್ರದೇಶ ಸರಕಾರವು ರಾಜ್ಯಾದ್ಯಂತದ ಎಲ್ಲ ಕಾಲೇಜುಗಳಿಗೆ ಸೂಚಿಸಿದೆ.
ಆರೆಸ್ಸೆಸ್‌ನ ಶಿಕ್ಷಣ ಘಟಕ ವಿದ್ಯಾಭಾರತಿಯ ಸಂಕಲನ ಸೇರಿದಂತೆ ಮಾಜಿ ಮತ್ತು ಹಾಲಿ ಆರೆಸ್ಸೆಸ್ ಪದಾಧಿಕಾರಿಗಳು ಬರೆದಿರುವ 88 ಕೃತಿಗಳ ಪಟ್ಟಿಯಿಂದ ಪುಸ್ತಕಗಳನ್ನು ಖರೀದಿಸುವಂತೆ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯು ವಿವಿಧ ಸರಕಾರಿ ಮತ್ತು ಖಾಸಗಿ ಕಾಲೇಜುಗಳಿಗೆ ಪತ್ರವನ್ನು ಬರೆದಿದೆ thewire.in ವರದಿ ಮಾಡಿದೆ.
ಪಟ್ಟಿಯಲ್ಲಿ ಆರೆಸ್ಸೆಸ್ ಹಾಲಿ ಮತ್ತು ಮಾಜಿ ನಾಯಕರಾದ ಸುರೇಶ್ ಸೋನಿ, ದೀನಾನಾಥ ಬಾತ್ರಾ ಮತ್ತು ಡಾ.ಅತುಲ ಕೊಠಾರಿ ಅವರ ಪುಸ್ತಕಗಳು ಸೇರಿವೆ.
ಭಾರತೀಯ ಜ್ಞಾನ ಪರಂಪರಾ ಪ್ರಕೋಷ್ಠವನ್ನು ರಚಿಸುವಂತೆ ಕಾಲೇಜುಗಳಿಗೆ ಸೂಚಿಸಲಾಗಿದ್ದು,ಪಟ್ಟಿಯಲ್ಲಿರುವ 88 ಪುಸ್ತಕಗಳನ್ನು ಇದು ಖರೀದಿಸಲಿದೆ. ಈ ಪೈಕಿ ಮೂರು ಪುಸ್ತಕಗಳನ್ನು ಸೋನಿ ಬರೆದಿದ್ದು,14 ಪುಸ್ತಕಗಳನ್ನು ಶಿಕ್ಷಣ ಕುರಿತು ಆರೆಸ್ಸೆಸ್ ಪ್ರಮುಖ ಸಿದ್ಧಾಂತಿಗಳಲ್ಲಿ ಒಬ್ಬರು ಎನ್ನಲಾಗಿರುವ ಬಾತ್ರಾ ರಚಿಸಿದ್ದಾರೆ.
ಬಾತ್ರಾ ಈ ಹಿಂದೆ 12ನೇ ತರಗತಿಯ ಹಿಂದಿ ಪಠ್ಯಪುಸ್ತಕ ‘ಆರೋಹ್’ನಿಂದ ಕ್ರಾಂತಿಕಾರಿ ಪಂಜಾಬಿ ಕವಿ ಅವತಾರ ಪಾಷ್ ಅವರ ‘ಸಬ್‌ಸೆ ಖತರ್ನಾಕ್’ ಕವಿತೆಯನ್ನು ಕೈಬಿಡಲು ಪ್ರಸ್ತಾವಿಸಿದ್ದರು.
ರಾಜ್ಯ ಸರಕಾರವು ಕಾಲೇಜುಗಳಿಗೆ ಕಳುಹಿಸಿರುವ ಪಟ್ಟಿಯಲ್ಲಿ ಸ್ವಾಮಿ ವಿವೇಕಾನಂದರ ಕೃತಿಗಳೂ ಸೇರಿವೆ. ಹೆಚ್ಚಿನ ಪುಸ್ತಕಗಳು ವೈದಿಕ ಗಣಿತಕ್ಕೆ ಸಂಬಂಧಿಸಿವೆ ಎಂದು ವರದಿಯು ತಿಳಿಸಿದೆ.
ಸರಕಾರದ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಇದು ವಿಭಜಕ ಸಿದ್ಧಾಂತಗಳು ಮತ್ತು ದ್ವೇಷದೊಂದಿಗೆ ವಿದ್ಯಾರ್ಥಿಗಳ ಮನಸ್ಸುಗಳಲ್ಲಿ ವಿಷವನ್ನು ತುಂಬುವ ಪ್ರಯತ್ನವಾಗಿದೆ ಎಂದು ಹೇಳಿದೆ.