ಮಧ್ಯಪ್ರದೇಶ: ಕೋಚಿಂಗ್‌ ಸೆಂಟರ್‌ ನ ಜಾಹೀರಾತು ವಿಡಿಯೊದಲ್ಲಿ ಸಮವಸ್ತ್ರ ಧರಿಸಿ ಕಾಣಿಸಿಕೊಂಡಿದ್ದ ಮಹಿಳಾ ಪೇದೆಯ ಅಮಾನತು

Update: 2024-08-17 11:51 GMT

PC : X 

ಭೋಪಾಲ್: ಕೋಚಿಂಗ್‌ ಸಂಸ್ಥೆಯೊಂದರ ಜಾಹೀರಾತಿನಲ್ಲಿ ಸಮವಸ್ತ್ರ ಧರಿಸಿ ಕಾಣಿಸಿಕೊಂಡಿದ್ದ ಮಹಿಳಾ ಪೇದೆಯೊಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿರುವ ಘಟನೆ ಮಧ್ಯಪ್ರದೇಶದ ರತ್ಲಮ್ ಜಿಲ್ಲೆಯಲ್ಲಿ ನಡೆದಿದೆ. ಈ ಜಾಹೀರಾತು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಪೊಲೀಸ್ ಇಲಾಖೆಯ ಪರೀಕ್ಷೆಗಳಿಗೆ ತರಬೇತಿ ನೀಡುವ ಇಂದೋರ್ ಮೂಲದ ತರಬೇತಿ ಸಂಸ್ಥೆಯ ಪರವಾಗಿ ಆ ಮಹಿಳಾ ಪೇದೆಯು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ಸಾಮಾಜಿಕ ಮಾಧ್ಯಯಮಗಳಲ್ಲಿ ವೈರಲ್ ಆಗಿರುವ ಜಾಹೀರಾತು ವಿಡಿಯೊ ಕುರಿತು ಪ್ರತಿಕ್ರಿಯಿಸಿರುವ ರತ್ಲಮ್ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಲೋಧಾ, “ಮಹಿಳಾ ಪೊಲೀಸ್ ಪೇದೆಯೊಬ್ಬರು ಖಾಸಗಿ ತರಬೇತಿ ಸಂಸ್ಥೆಯ ಪರವಾಗಿ ಸಮವಸ್ತ್ರ ಧರಿಸಿ ಪ್ರಚಾರ ಮಾಡುತ್ತಿರುವುದು ಸಾಮಾಜಿಕ ಮಾಧ್ಯಮಗಳಿಂದ ತಿಳಿದು ಬಂದಿದೆ. ಸದರಿ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಇಲಾಖಾ ತನಿಖೆ ಪ್ರಗತಿಯಲ್ಲಿದೆ” ಎಂದು ಹೇಳಿದ್ದಾರೆ.

ತರಬೇತಿ ಸಂಸ್ಥೆಯ ಆ ಜಾಹೀರಾತು ವಿಡಿಯೊದಲ್ಲಿ, ಸಂಚಾರಿ ಕರ್ತವ್ಯದಲ್ಲಿರುವ ಪೊಲೀಸ್ ಪೇದೆಯೊಬ್ಬರನ್ನು ಭೇಟಿಯಾಗುವ ಯುವತಿಯು, “ಹೆಲೊ ಮೇಡಂ, ನಾನು ಹಲವಾರು ದಿನಗಳಿಂದ ನಿಮ್ಮನ್ನು ಅನುಸರಿಸುತ್ತಿದ್ದೇನೆ. ನನಗೂ ನಿಮ್ಮಂತೆಯೇ ಆಗಬೇಕು. ನಾನು ಪೊಲೀಸಾಗಲು ಎಲ್ಲಿ ಸಿದ್ಧತೆ ನಡೆಸಬೇಕು?” ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಪ್ರತಿಯಾಗಿ, ಇಂದೋರ್ ಮೂಲದ ತರಬೇತಿ ಸಂಸ್ಥೆಯೊಂದರ ಹೆಸರನ್ನು ಉಲ್ಲೇಖಿಸುವ ಆ ಪೊಲೀಸ್ ಪೇದೆ, ನಾನು ಮಧ್ಯಪ್ರದೇಶ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಗಾಗಿ ಆ ಸಂಸ್ಥೆಯಲ್ಲೇ ಸಿದ್ಧತೆ ನಡೆಸುತ್ತಿದ್ದೇನೆ” ಎಂದು ಉತ್ತರಿಸುತ್ತಾರೆ.

ಇದಲ್ಲದೆ, ಆ ಸಂಸ್ಥೆಯ ಯೂಟ್ಯೂಬ್ ವಾಹಿನಿಯನ್ನೂ ಪರಿಶೀಲಿಸುವಂತೆ ಸಲಹೆ ನೀಡುವ ಆ ಮಹಿಳಾ ಪೇದೆಯು, ಆ ಸಂಸ್ಥೆಯು ಮಧ್ಯಪ್ರದೇಶ ಸಿಬ್ಬಂದಿ ಆಯ್ಕೆ ಮಂಡಳಿ (MPESB) ಪರೀಕ್ಷಾ ಸಿದ್ಧತೆಗೂ ತರಬೇತಿ ನೀಡುತ್ತದೆ ಎಂದೂ ಸಲಹೆ ನೀಡುವುದು ಆ ವಿಡಿಯೊದಲ್ಲಿ ಕಂಡು ಬರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News