ಮಹಾರಾಷ್ಟ್ರ | ಮತದಾನದ ವೀಡಿಯೊ ಸೆರೆ ಹಿಡಿದ ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು

Update: 2024-04-22 15:10 GMT

ಸಾಂದರ್ಭಿಕ ಚಿತ್ರ

ನಾಗಪುರ : ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ತನ್ನ ಮತ ಚಲಾಯಿಸುವ ಸಂದರ್ಭ ಮೊಬೈಲ್ ಫೋನ್ ನಿಂದ ವೀಡಿಯೊ ಮಾಡಿ, ಅದನ್ನು ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಅಪ್ಲೋಡ್ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ಕಾರ್ಯಕರ್ತನೋರ್ವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮತಗಟ್ಟೆಯಲ್ಲಿ ಮತದಾರರಿಗೆ ಮೊಬೈಲ್ ಫೋನ್ ಗಳನ್ನು ಬಳಸಲು ಅನುಮತಿ ಇಲ್ಲ.

ಇಲ್ಲಿನ ರಾಮ್ತೇಕ್ ಲೋಕಸಭಾ ಕ್ಷೇತ್ರದ ಮೌದಾ ತೆಹ್ಸಿಲ್ನ ಮತಗಟ್ಟೆಯಲ್ಲಿ ಶುಕ್ರವಾರ ಕಾಂಗ್ರೆಸ್ ನ ಚುನಾವಣಾ ಪ್ರತಿನಿಧಿಯಾಗಿ ಹಾಜರಿದ್ದ ಸೋನಂ ರಾಜೇಶ್ ಶ್ರವಾಂಕರ್ (23) ಆರೋಪಿ ಎಂದು ಮೌದಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಸುಮಾರು 5 ಗಂಟೆಗೆ ಶ್ರವಾಂಕರ್ ಇವಿಎಂ ಮೂಲಕ ಮತದಾನ ಮಾಡಲು ತೆರಳಿದರು ಹಾಗೂ ಅದನ್ನು ವೀಡಿಯೊ ಮಾಡಿದರು. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಮತಗಟ್ಟೆಯ ಉಸ್ತುವಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೌದಾ ಪೊಲೀಸ್ ಠಾಣೆಯ ಪೊಲೀಸರು ಶ್ರವಾಂಕರ್ ವಿರುದ್ಧ ರವಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News