ಮಹಾರಾಷ್ಟ್ರ | ಮರಾಠ ಮೀಸಲಾತಿ ಹೋರಾಟ ; ಸಾವಂಗಿಯಲ್ಲಿ ಹಿಂದುಳಿದ ವರ್ಗದ ಮತಗಳು ನಿರ್ಣಾಯಕ ಸಾಧ್ಯತೆ
ಘತ್ರಪತಿ ಸಂಭಾಜಿನಗರ : ಚುನಾವಣಾ ವೀಕ್ಷಕರ ಪ್ರಕಾರ, ಮನೋಜ್ ಜರಂಗೆ ನೇತೃತ್ವದಲ್ಲಿ ನಡೆದಿದ್ದ ಮರಾಠ ಮೀಸಲಾತಿ ಹೋರಾಟದ ಕೇಂದ್ರ ಸ್ಥಾನವಾದ ಅಂತರವಾಲಿ ಸಾರಥಿ ಗ್ರಾಮವನ್ನೂ ಹೊಂದಿರುವ ಘನ್ ಸಾವಂಗಿ ವಿಧಾನಸಭಾ ಕ್ಷೇತ್ರದಲ್ಲಿ ಇತರೆ ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕವಾಗಲಿವೆ ಎನ್ನಲಾಗಿದೆ.
ಮರಾಠ ಮೀಸಲಾತಿ ಹೋರಾಟ ನಡೆದ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮರಾಠವಾಡ ಪ್ರಾಂತ್ಯದಲ್ಲಿನ ಜಲ್ನಾ ಜಿಲ್ಲೆಗೆ ಘನ್ ಸಾವಂಗಿ ವಿಧಾನಸಭಾ ಕ್ಷೇತ್ರ ಸೇರುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಪ್ರಾಂತ್ಯದಲ್ಲಿನ ಎಂಟು ಲೋಕಸಭಾ ಕ್ಷೇತ್ರಗಳ ಪೈಕಿ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಮಹಾವಿಕಾಸ್ ಅಘಾಡಿ ಜಯಭೇರಿ ಬಾರಿಸಿತ್ತು. ಆದರೆ, ಆಡಳಿತ ಮೈತ್ರಿಕೂಟ ಮಹಾಯುತಿ ಭಾಗವಾಗಿದ್ದ ಬಿಜೆಪಿ ಇಲ್ಲಿ ದಯನೀಯವಾಗಿ ನೆಲಕಚ್ಚಿತ್ತು.
2009ರಿಂದ ಈ ಕ್ಷೇತ್ರವನ್ನು ಶರದ್ ಪವಾರ್ ನೇತೃತ್ವದ ಎನ್ಸಿಪಿ ನಾಯಕ ರಾಜೇಶ್ ತೋಪೆ ಪ್ರತಿನಿಧಿಸುತ್ತಿದ್ದಾರೆ. ಅವರು ಈ ಬಾರಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಅಭ್ಯರ್ಥಿ ಹಿಕ್ಮತ್ ಉಧಾನ್ ರನ್ನು ಎದುರಿಸುತ್ತಿದ್ದಾರೆ. 2019ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ತೋಪೆ ಕೇವಲ 1,600 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಕ್ಷೇತ್ರದಲ್ಲಿನ ಚುನಾವಣಾ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಟಿವಿ ಪತ್ರಕರ್ತ ರವಿ ಮುಂಡೆ, “ಸ್ಪರ್ಧಾ ಕಣದಲ್ಲಿ ಬಿಜೆಪಿಯಲ್ಲಿದ್ದ ಸತೀಶ್ ಘಾಡ್ಗೆ ಹಾಗೂ ಉದ್ಧವ್ ಠಾಕ್ರೆ ಬಣದಲ್ಲಿದ್ದ ಶಿವಾಜಿ ರಾವ್ ಛೋಟೆ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವುದರಿಂದ, ಮರಾಠರ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
“ಹೀಗಾಗಿ ಘನ್ ಸಾವಂಗಿ ವಿಧಾನಸಭಾ ಕ್ಷೇತ್ರದಲ್ಲಿ ಇತರೆ ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕವಾಗಲಿವೆ. ಚುನಾವಣೆ ಕುರಿತು ಜರಾಂಗೆ ತೆಗೆದುಕೊಂಡಿರುವ ನಿರ್ಧಾರ ಕೂಡಾ ಪ್ರಮುಖ ಸಂಗತಿಯಾಗಲಿದೆ. ಮರಾಠ ಮೀಸಲಾತಿ ಹೋರಾಟಕ್ಕೆ ತೋಪೆ ನೀಡಿದ ಬೆಂಬಲದ ಬಗ್ಗೆ ಇತರೆ ಸಮುದಾಯಗಳು ಅಸಮಾಧಾನಗೊಂಡಿವೆ” ಎಂದು ಅವರು ಹೇಳಿದ್ದಾರೆ.
ಸ್ಥಳೀಯ ನಿವಾಸಿ ವೈಭವ್ ಜೋಶಿ ಪ್ರಕಾರ, ಮತಗಳ ವಿಭಜನೆಯಿಂದ ತೋಪೆಗೆ ಲಾಭವಾಗಲಿದ್ದು, ಇತರೆ ಹಿಂದುಳಿದ ವರ್ಗಗಳ ಮತಗಳು ಘನ್ ಸಾವಂಗಿ ಕ್ಷೇತ್ರದ ಮುಂದಿನ ಶಾಸಕರನ್ನು ನಿರ್ಧರಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.