ಮಹಾರಾಷ್ಟ್ರ| ಮಹಾ ವಿಕಾಸ್ ಅಘಾಡಿಯೊಂದಿಗೆ ಮೈತ್ರಿಯಿಲ್ಲ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಪ್ರಕಾಶ್ ಅಂಬೇಡ್ಕರ್
ಮುಂಬೈ: ಮಹಾರಾಷ್ಟ್ರದಲ್ಲಿನ ಮೊದಲ ಹಂತದ ಚುನಾವಣೆಗೆ ಅಭ್ಯರ್ಥಿಗಳನ್ನು ಪ್ರಕಟಿಸಿರುವ ವಂಚಿತ್ ಬಹುಜನ್ ಅಘಾಡಿಯ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್, ಆ ಮೂಲಕ ಮಹಾ ವಿಕಾಸ್ ಅಘಾಡಿಯೊಂದಿಗೆ ಮೈತ್ರಿಯಿಂದ ದೂರ ಉಳಿಯುವ ಸೂಚನೆಯನ್ನು ನೀಡಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್ ಅಂಬೇಡ್ಕರ್, ಮಹಾ ವಿಕಾಸ್ ಅಘಾಡಿಯ ಮೈತ್ರಿ ಪಕ್ಷಗಳಾದ ಕಾಂಗ್ರೆಸ್, ಎನ್ಸಿಪಿ (ಶರದ್ ಪವಾರ್ ಬಣ), ಶಿವಸೇನೆ (ಉದ್ಧವ್ ಬಣ) ತಮ್ಮ ಪಕ್ಷವನ್ನು ವಂಶ ಪಾರಂಪರ್ಯ ರಾಜಕಾರಣವನ್ನು ಉತ್ತೇಜಿಸಲು ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ದೂರಿದರು.
ಈ ಸಂದರ್ಭದಲ್ಲಿ ಅವರು ಮೊದಲ ಹಂತದ ಚುನಾವಣೆಯಲ್ಲಿ ಅಕೋಲ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸ್ಪರ್ಧೆಯೂ ಸೇರಿದಂತೆ ಒಟ್ಟು ಎಂಟು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದರು.
ಭಂಡಾರ ಗೊಂಡಿಯಾ ಕ್ಷೇತ್ರದಿಂದ ಸಂಜಯ್ ಕೇವತ್, ಗಡ್ಚಿರೋಲಿ ಕ್ಷೇತ್ರದಿಂದ ಹಿತೇಶ್ ಮಾದವಿ, ಬುಲ್ಧಾನದಿಂದ ರಾಜೇಶ್ ಬೇಲೆ, ವಸಂತ್ ಮಗರ್, ವಾರ್ಧಾದಿಂದ ಪ್ರಾಕಾಜ್ಕತ ಪಿಲ್ಲೇವರ್, ರಾಜೇಂದ್ರ ಸಾಲುಂಖೆ ಹಾಗೂ ಯವತ್ಮಲ್-ವಾಶಿಮ್ ನಿಂದ ಖೇಮ್ ಸಿಂಗ್ ಪವಾರ್ ಅವರನ್ನು ವಂಚಿತ್ ಬಹುಜನ ಅಘಾಡಿ ಪಕ್ಷವು ಕಣಕ್ಕಿಳಿಸಿದೆ.