ಸರ್ಕಾರಿ ಬಂಗಲೆ ತೆರವುಗೊಳಿಸಿದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ
ಹೊಸದಿಲ್ಲಿ: ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಲೋಕಸಭೆಯಿಂದ ಕಳೆದ ತಿಂಗಳು ಉಚ್ಚಾಟನೆಗೊಂಡಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ತಮ್ಮ ಸರ್ಕಾರಿ ಬಂಗಲೆಯನ್ನು ಇಂದು ತೆರವುಗೊಳಿಸಿದ್ದಾರೆ. ಈ ವಾರ ತಕ್ಷಣ ಬಂಗಲೆ ತೆರವುಗೊಳಿಸುವಂತೆ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತಲ್ಲದೆ, ತಾನಾಗಿಯೇ ತೆರವುಗೊಳಿಸದೇ ಇದ್ದಲ್ಲಿ ಬಲ ಪ್ರಯೋಗದಿಂದ ತೆರವುಗೊಳಿಸಲಾಗುವುದು ಎಂದು ಡೈರೆಕ್ಟರೇಟ್ ಆಫ್ ಎಸ್ಟೇಟ್ಸ್ ನೀಡಿದ್ದ ನೋಟಿಸಿನಲ್ಲಿ ತಿಳಿಸಲಾಗಿತ್ತು.
ಶುಕ್ರವಾರ ಡೈರೆಕ್ಟರೇಟ್ ಆಫ್ ಎಸ್ಟೇಟ್ಸ್‌ನ ಅಧಿಕಾರಿಗಳ ತಂಡವೊಂದನ್ನು ಅವರ ನಿವಾಸಕ್ಕೆ ಕಳುಹಿಸಲಾಗಿತ್ತೆಂದು ತಿಳಿದು ಬಂದಿದೆ.
ತಮಗೆ ನೀಡಲಾಗಿದ್ದ ನೋಟಿಸ್ ಪ್ರಶ್ನಿಸಿ ಮಹುವಾ ಅವರು ಸಲ್ಲಿಸಿದ್ದ ಅಪೀಲನ್ನು ಗುರುವಾರ ದಿಲ್ಲಿ ಹೈಕೋರ್ಟ್ ತಿರಸ್ಕರಿಸಿತ್ತು ಹಾಗೂ ನೋಟಿಸ್ ಗೆ ತಡೆಯಾಜ್ಞೆ ವಿಧಿಸಲು ನಿರಾಕರಿಸಿತ್ತು.
ಅವರನ್ನು ಸಂಸದೆ ಸ್ಥಾನದಿಂದ ಅಮಾನತುಗೊಳಿಸಲಾಗಿರುವುದರಿಂದ ಬಂಗಲೆಯಲ್ಲಿ ವಾಸಿಸುವುದನ್ನು ಮುಂದುವರಿಸಲು ಮಹುವಾ ಅವರಿಗೆ ಹಕ್ಕಿಲ್ಲ ಎಂದು ದಿಲ್ಲಿ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.
ನೋಟಿಸ್ ಜಾರಿಗೊಂಡ ನಂತರ ಮಹುವಾ ಅವರು ಎರಡು ಬಾರಿ ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.