ಮಹಿಳೆಯರಿಗೆ ಹೋಲಿಸಿದರೆ ಪುರುಷರ ಆತ್ಮಹತ್ಯೆ ಪ್ರಮಾಣ ಭಾರತದಲ್ಲಿ 2.6 ಪಟ್ಟು ಅಧಿಕ: ವರದಿ

Update: 2023-08-29 15:36 GMT

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಭಾರತೀಯ ಪುರುಷರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಕಳೆದ 7 ವರ್ಷಗಳಲ್ಲಿ ಮೂರನೇ ಒಂದರಷ್ಟು ಹೆಚ್ಚಾಗಿದೆ ಎಂದು ‘ದಿ ಲಾನ್ಸೆಟ್ ರೀಜನಲ್ ಹೆಲ್ತ್’ವರದಿ ಹೇಳಿದೆ. 2014ರಲ್ಲಿ 89,129 ಪುರುಷರು ಹಾಗೂ 42,521 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅನುಪಾತ 2021ರಲ್ಲಿ 2.64 ಪಟ್ಟು ಹೆಚ್ಚಾಗಿದೆ. ಈ ವರ್ಷ 1,18,979 ಪುರುಷರು ಹಾಗೂ 45.026 ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಆತ್ಮಹತ್ಯೆ ಪ್ರಮಾಣ ವಿವಾಹಿತ ಪುರುಷರಲ್ಲಿ ತೀವ್ರ ಕಳವಳಕಾರಿಯಾಗಿದೆ. 2021ರಲ್ಲಿ ವಿವಾಹಿತ ಪುರುಷರ ಆತ್ಮಹತ್ಯೆ ಪ್ರಮಾಣ ವಿವಾಹಿತ ಮಹಿಳೆಯರ ಆತ್ಮಹತ್ಯೆ ಪ್ರಮಾಣಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. 1 ಲಕ್ಷ ಜನರಲ್ಲಿ 8.4 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಹೋಲಿಸಿದರೆ, 24.3 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಆತ್ಮಹತ್ಯೆಯ ಮಾದರಿಯ ಬದಲಾವಣೆ ಕುರಿತ ಅಧ್ಯಯನವು ಕೌಟುಂಬಿಕ ಸಮಸ್ಯೆ ಹಾಗೂ ಆರೋಗ್ಯ ಕಾರಣಗಳು ಪುರುಷರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಎರಡು ಪ್ರಮುಖ ಕಾರಣಗಳು ಎಂದು ಗುರುತಿಸಿದೆ.

ಮಹಿಳೆಯರು ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸುತ್ತಿರುವುದು ಅವರಲ್ಲಿ ಆತ್ಮಹತ್ಯೆ ಕಡಿಮೆ ಇರುವುದಕ್ಕೆ ಕಾರಣ ಎಂದು ಅದು ಹೇಳಿದೆ. ‘‘ಈ ಎರಡು ಕಾರಣಗಳಿಂದ 2014-21ರ ಅವಧಿಯಲ್ಲಿ ಪುರುಷ ಹಾಗೂ ಮಹಿಳೆಯ ಆತ್ಮಹತ್ಯೆ ಪ್ರಮಾಣ ಅನುಕ್ರಮವಾಗಿ 1.9 ಹಾಗೂ 2.5ರಿಂದ 2.4 ಹಾಗೂ 2.5 ಏರಿಕೆಯಾಗಿದೆ. 2014-2021ರ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕೌಟುಂಬಿಕ ಸಮಸ್ಯೆ ಕಾರಣ ಎಂದು ಹೇಳುವ ಪುರುಷರ ಸಂಖ್ಯೆ ಶೇ. 107.5ಕ್ಕೆ ಹೆಚ್ಚಾಯಿತು. ಇದು ಮಹಿಳೆಯರಿಗಿಂತ ಸುಮಾರು ಎರಡು ಪಟ್ಟು ಹೆಚ್ಚುʼಎಂದು ವರದಿ ಹೇಳಿದೆ.

ರಾಷ್ಟ್ರೀಯ ಅಪರಾಧ ಬ್ಯುರೋದ ದಾಖಲೆಯನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. 30ರಿಂದ 34 ಪ್ರಾಯ ಗುಂಪಿನ ಪುರುಷರಲ್ಲಿ ಆತ್ಮಹತ್ಯೆಯ ಪ್ರಮಾಣ ಅತ್ಯಧಿಕ 27.2 ಆಗಿದೆ. ಈ ಆತ್ಮಹತ್ಯೆ ಪ್ರಮಾಣ 2014ರಲ್ಲಿ 22.2 ಇದ್ದುದು 2021ರಲ್ಲಿ 22.7ಕ್ಕೆ ತಲುಪಿ ಸುಮಾರು 5 ಅಂಶ ಏರಿಕೆಯಾಗಿದೆ. 18ರಿಂದ 29 ಪ್ರಾಯ ಗುಂಪಿನ ಪುರುಷರ ಆತ್ಮಹತ್ಯೆ ಪ್ರಮಾಣ 2014ರಲ್ಲಿ 20 ಇದ್ದುದು 2021ರಲ್ಲಿ 25.6ಕ್ಕೆ ತಲುಪಿ ಸುಮಾರು 5.6 ಅಂಶ ಏರಿಕೆಯಾಗಿದೆ. ಒಟ್ಟಾರೆ 2014ರಿಂದ 2021ರ ನಡುವೆ ಭಾರತೀಯ ಪುರುಷರ ಆತ್ಮಹತ್ಯೆ ಪ್ರಮಾಣ ಮಹಿಳೆಯರ ಆತ್ಮಹತ್ಯೆ ಪ್ರಮಾಣ ಶೇ. 5.89ಕ್ಕೆ ಹೋಲಿಸಿದರೆ ಶೇ. 33.5ಕ್ಕೆ ಏರಿಕೆಯಾಗಿದೆ. ಸಾಮಾಜಿಕ ಗುಂಪುಗಳಲ್ಲಿ ದಿನಗೂಲಿ ನೌಕರರು ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಈ ಆತ್ಮಹತ್ಯೆ ಪ್ರಕರಣಗಳು 2014 ಹಾಗೂ 2021ರ ನಡುವೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. 2014ರಲ್ಲಿ 13,944 ಕೂಲಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2021ರಲ್ಲಿ ಅದು 37,751ಕ್ಕೆ ಏರಿಕೆಯಾಗಿದೆ. ಮಹಿಳೆಯರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲೂ ಇದೇ ರೀತಿಯ ಕಳವಳ ಕಂಡು ಬಂದಿದೆ. 2014ರಲ್ಲಿ 1,791 ಮಹಿಳೆಯರು ಹಾಗೂ 2021ರಲ್ಲಿ 4,246 ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News