ಜಮ್ಮು ಕಾಶ್ಮೀರ ರಾಜ್ಯದ ಸ್ಥಾನಮಾನ ಮರಳಿ ಪಡೆಯುವುದನ್ನು ಕಾಂಗ್ರೆಸ್ ಖಚಿತಪಡಿಸುತ್ತದೆ : ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ : ಪಕ್ಷ ಜಮ್ಮು ಹಾಗೂ ಕಾಶ್ಮೀರದ ಹಕ್ಕುಗಳಿಗೆ ಗ್ಯಾರಂಟಿ ನೀಡುತ್ತದೆ. ಅಲ್ಲದೆ, ಅದು ಪೂರ್ಣ ಪ್ರಮಾಣದ ರಾಜ್ಯದ ಸ್ಥಾನ ಮಾನ ಪಡೆಯುವುದನ್ನು ಖಚಿತಪಡಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದ್ದಾರೆ.
ವಿಧಾನ ಸಭೆ ಚುನಾವಣೆಯ ಮುನ್ನ ಕಾಂಗ್ರೆಸ್ ನೀಡಿದ 7 ಗ್ಯಾರಂಟಿಗಳ ಭರವಸೆಯ ಸ್ಕ್ರೀನ್ ಶಾಟ್‌ಗಳನ್ನು ‘ಎಕ್ಸ್’ನ ಖಾತೆಯಲ್ಲಿ ಲಗತ್ತಿಸಿರುವ ಖರ್ಗೆ, 1 ಲಕ್ಷ ಸರಕಾರಿ ಉದ್ಯೋಗಗಳಿಗೆ ನೇಮಕಾತಿ ಮಾಡುವುದರೊಂದಿಗೆ ಪಕ್ಷ ಯುವ ಜನರಿಗೆ ಹೊಸ ಶಕ್ತಿ ನೀಡಲಿದೆ ಎಂದರು.
‘‘ಜಮ್ಮು ಹಾಗೂ ಕಾಶ್ಮೀರದ ಹಕ್ಕುಗಳಿಗೆ ಕಾಂಗ್ರೆಸ್ ಗ್ಯಾರಂಟಿ ನೀಡುತ್ತದೆ. ಜಮ್ಮು ಹಾಗೂ ಕಾಶ್ಮೀರ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನವನ್ನು ಪಡೆಯಲಿದೆೆ’’ ಎಂದು ಅವರು ತನ್ನ ಹಿಂದಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಪ್ರತಿ ಕುಟುಂಬಕ್ಕೆ ಉಚಿತ ಚಿಕಿತ್ಸೆಗೆ 25 ಲಕ್ಷ ಹಾಗೂ ಪ್ರತಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒದಗಿಸುವ ಪಕ್ಷದ ಭರವಸೆ ಬಗ್ಗೆ ಖರ್ಗೆ ಅವರು ಗಮನ ಸೆಳೆದರು.
ಡಾ. ಮನಮೋಹನ್ ಸಿಂಗ್ ಅವರ ಕಾಶ್ಮೀರ ಪಂಡಿತರ ಪುನರ್ವಸತಿಯ ಯೋಜನೆಯನ್ನು ವಿಸ್ತರಿಸಲಾಗುವುದು. ಸಂವಿಧಾನ ಆಧಾರಿತ ಇತರ ಹಿಂದುಳಿದ ವರ್ಗಗಳ ಹಕ್ಕುಗಳನ್ನು ರಕ್ಷಿಸಲಾಗುವುದು ಎಂದು ಖರ್ಗೆ ಹೇಳಿದರು.
ಕುಟುಂಬದ ಮಹಿಳಾ ಮುಖ್ಯಸ್ಥೆ ಪ್ರತಿ ತಿಂಗಳು 3 ಸಾವಿರ ರೂ. ಹಣಕಾಸು ರಕ್ಷಣೆ ಪಡೆಯಲಿದ್ದಾರೆ. ಕುಟುಂಬದ ಪ್ರತಿ ಸದಸ್ಯನಿಗೆ 11 ಕಿ.ಗ್ರಾಂ. ಧಾನ್ಯ ನೀಡುವ ಮೂಲಕ ಆಹಾರ ಭದ್ರತೆ ಒದಗಿಸುವ ಕುರಿತು ಖರ್ಗೆ ಅವರು ಗಮನ ಸೆಳೆದರು.