ಪ್ರಧಾನಿ ಮೋದಿ ಇಷ್ಟಪಟ್ಟಿದ್ದನ್ನು ಮಾಡಿ ಬಡಿಸುತ್ತೇನೆ ಎಂದ ಮಮತಾ ಬ್ಯಾನರ್ಜಿ!

Update: 2024-05-14 15:25 GMT

ನರೇಂದ್ರ ಮೋದಿ , ಮಮತಾ ಬ್ಯಾನರ್ಜಿ | PC : PTI 

ಕೋಲ್ಕತ್ತಾ: “ಪ್ರಧಾನಿ ನರೇಂದ್ರ ಮೋದಿ ಇಷ್ಟಪಟ್ಟಿದ್ದನ್ನು ಮಾಡಿ ಬಡಿಸುತ್ತೇನೆ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆಗೆ ವಿವಿಧ ರಾಜಕೀಯ ಪಕ್ಷಗಳಿಂದ ಮಿಶ್ರೆ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಈ ಹೇಳಿಕೆಯ ಹಿಂದೆ ರಾಜಕೀಯ ಕಾರ್ಯಸೂಚಿ ಅಡಗಿದೆ ಎಂದು ಬಿಜೆಪಿ ಶಂಕಿಸಿದ್ದರೆ, ಟಿಎಂಸಿ ಹಾಗೂ ಬಿಜೆಪಿ ನಡುವಿನ ಬಲವಾದ ಒಳ ಒಪ್ಪಂದವನ್ನು ಈ ಹೇಳಿಕೆಯು ಸೂಚಿಸುತ್ತಿದೆ ಎಂದು ಸಿಪಿಐ(ಎಂ) ಆರೋಪಿಸಿದೆ.

ಕಳೆದ ತಿಂಗಳು ಹಿಂದೂಗಳು ಮಾಂಸಾಹಾರ ತ್ಯಜಿಸುವ ಅವಧಿಯಲ್ಲಿ ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ ಮಾಂಸಾಹಾರ ಸೇವಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಆರೋಪವನ್ನು ನಿನ್ನೆ ವ್ಯಂಗ್ಯ ಮಾಡಿದ್ದ ಮಮತಾ ಬ್ಯಾನರ್ಜಿ, “ಮೋದಿ ಇಷ್ಟಪಟ್ಟಿದ್ದನ್ನು ಮಾಡಿ ಬಡಿಸುತ್ತೇನೆ” ಎಂದು ಹೇಳಿಕೆ ನೀಡಿದ್ದರು. ಆದರೆ, ತಾನು ತಯಾರಿಸಿದ ಅಡುಗೆಯನ್ನು ಮೋದಿ ತಿನ್ನುತ್ತಾರೊ ಇಲ್ಲವೊ ಎಂಬುದರ ಬಗ್ಗೆ ಅವರು ಖಾತರಿ ವ್ಯಕ್ತಪಡಿಸಲಿಲ್ಲ.

ಬಿಜೆಪಿ ಜನರ ಆಹಾರಾಭ್ಯಾಸದಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂಬ ಆರೋಪದ ಕುರಿತು ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶದಲ್ಲಿ ಅವರು ಈ ಹೇಳಿಕೆ ನೀಡಿದ್ದು, “ನಾನು ನನ್ನ ಬಾಲ್ಯದಿಂದಲೂ ಅಡುಗೆ ಮಾಡುತ್ತಿದ್ದೇನೆ. ಜನರು ನನ್ನ ಅಡುಗೆ ಕೌಶಲವನ್ನು ಪ್ರಶಂಸಿಸಿದ್ದಾರೆ. ಆದರೆ, ಮೋದಿ ನನ್ನ ಆಹಾರವನ್ನು ಸ್ವೀಕರಿಸುತ್ತಾರೆಯೆ? ಅವರು ನನ್ನನ್ನು ನಂಬುತ್ತಾರೆಯೆ? ಅವರು ಏನೆಲ್ಲ ಇಷ್ಟಪಡುತ್ತಾರೊ ಅದೆಲ್ಲವನ್ನು ನಾನು ತಯಾರಿಸುತ್ತೇನೆ” ಎಂದು ವ್ಯಂಗ್ಯವಾಗಿ ಹೇಳಿದ್ದರು.

ಮಮತಾ ಬ್ಯಾನರ್ಜಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಮೋದಿಗೆ ಮೀನು ತಿನ್ನಿಸಲು ಮಮತಾ ಬಯಸುತ್ತಿದ್ದಾರೆ ಎಂದು ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಸಸ್ಯಾಹಾರಿಯಾಗಿರುವುದರಿಂದ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಕೇಸರಿ ಪಾಳಯ ಇಂತಹ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ಮಮತಾ ಬ್ಯಾನರ್ಜಿ ಅವರ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಸಿಪಿಐ(ಎಂ) ನಾಯಕ ಬಿಕಾಶ್ ಭಟ್ಟಾಚಾರ್ಯ, “ಸಹೋದರ-ಸಹೋದರಿಯಾಗಿರುವುದರಿಂದ ಮಮತಾ ದೀದಿ ಖಂಡಿತವಾಗಿ ಪ್ರಧಾನಿಗಾಗಿ ಅಡುಗೆ ತಯಾರಿಸಲಿದ್ದಾರೆ. ಇದು ಮೋದಿಯನ್ನು ಓಲೈಸಲೋ ತಿಳಿದಿಲ್ಲ” ಎಂದು ಕಟಕಿಯಾಡಿದ್ದಾರೆ.

ಬಿಜೆಪಿ ನಡುವಿನ ವ್ಯೂಹಾತ್ಮಕ ಒಪ್ಪಂದವನ್ನು ಉಲ್ಲೇಖಿಸಲು ಎಡಪಕ್ಷಗಳು ಹಾಗೂ ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕವು ಚುನಾವಣಾ ಪ್ರಚಾರದಲ್ಲಿ ಬಳಸುತ್ತಿರುವ “ದೀದಿಭಾಯಿ-ಮೋದಿಭಾಯಿ” ವ್ಯಂಗ್ಯವನ್ನೇ ಭಟ್ಟಾಚಾರ್ಯ ಕೂಡಾ ಬಳಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News