ಮಣಿಪುರದಲ್ಲಿ ಭುಗಿಲೆದ್ದ ಪ್ರತಿಭಟನೆಗಳು: ಮಹಾರಾಷ್ಟ್ರದಲ್ಲಿ ಚುನಾವಣಾ ರ‍್ಯಾಲಿಗಳನ್ನು ರದ್ದುಗೊಳಿಸಿ ದಿಲ್ಲಿಗೆ ಮರಳಿದ ಅಮಿತ್ ಶಾ
ಹೊಸದಿಲ್ಲಿ: ಮಣಿಪುರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರವಿವಾರ ಮಹಾರಾಷ್ಟ್ರದಲ್ಲಿಯ ತನ್ನ ಚುನಾವಣಾ ರ‍್ಯಾಲಿಗಳನ್ನು ರದ್ದುಗೊಳಿಸಿ ದಿಲ್ಲಿಗೆ ಮರಳಿದ್ದಾರೆ.
ಮಣಿಪುರದಲ್ಲಿಯ ಸ್ಥಿತಿಯನ್ನು ಪುನರ್ಪರಿಶೀಲಿಸಲು ಅಮಿತ್ ಶಾ ಸಭೆಯೊಂದನ್ನು ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿದವು.
ಶನಿವಾರ ರಾತ್ರಿ ಇಂಫಾಲ ಕಣಿವೆಯ ವಿವಿಧ ಜಿಲ್ಲೆಗಳಲ್ಲಿ ಓರ್ವ ಹಿರಿಯ ಸಚಿವ ಸೇರಿದಂತೆ ಇನ್ನೂ ಮೂವರು ಬಿಜೆಪಿ ಶಾಸಕರು ಮತ್ತು ಓರ್ವ ಕಾಂಗ್ರೆಸ್ ನಾಯಕರ ನಿವಾಸಗಳಿಗೆ ಉದ್ರಿಕ್ತ ಗುಂಪುಗಳು ಬೆಂಕಿ ಹಚ್ಚಿವೆ. ಇದೇ ವೇಳೆ ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಅವರ ಪೂರ್ವಜರ ನಿವಾಸಕ್ಕೆ ನುಗ್ಗುವ ಪ್ರತಿಭಟನಾಕಾರರ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ.
ಮಹಾರಾಷ್ಟ್ರದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಅಭಿಯಾನದ ಅಂಗವಾಗಿ ಶಾ ಕೆಲವು ಚುನಾವಣಾ ರ‍್ಯಾಲಿಗಳಲ್ಲಿ ಭಾಗವಹಿಸಲಿದ್ದರು, ಆದರೆ ರ‍್ಯಾಲಿಗಳನ್ನು ರದ್ದುಗೊಳಿಸಿ ರಾಷ್ಟ್ರ ರಾಜಧಾನಿಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಮಿತ್ ಶಾ ಅವರ ರ‍್ಯಾಲಿಗಳು ರದ್ದುಗೊಂಡಿರುವ ಹಿಂದಿನ ಕಾರಣದ ಕುರಿತು ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ, ಮಣಿಪುರದಲ್ಲಿಯ ಉದ್ವಿಗ್ನ ಸ್ಥಿತಿ ಕಾರಣವಾಗಿರಬಹುದು ಎಂದು ಮೂಲಗಳು ಸೂಚಿಸಿವೆ.
ಮಣಿಪುರದಲ್ಲಿಯ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಅದನ್ನು ನಿಭಾಯಿಸಲು ರಾಜ್ಯ ಸರಕಾರಕ್ಕೆ ನೆರವಾಗಲು ಕೇಂದ್ರೀಯ ಭದ್ರತಾ ಅಧಿಕಾರಿಗಳ ತಂಡವೊಂದು ಶೀಘ್ರ ರಾಜ್ಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಜಿರಿಬಾಮ್ ಜಿಲ್ಲೆಯಲ್ಲಿ ಉಗ್ರರಿಂದ ಅಪಹೃತ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳ ಹತ್ಯೆಗಳಿಂದ ಆಕ್ರೋಶಿತ ಜನರು ಶನಿವಾರ ಮೂವರು ರಾಜ್ಯ ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ನಡೆಸಿದ ಬಳಿಕ ಅನಿರ್ದಿಷ್ಟಾವಧಿ ಕರ್ಫ್ಯೂವನ್ನು ಹೇರಲಾಗಿತ್ತಾದರೂ ರಾತ್ರಿ ಮತ್ತೆ ಹೊಸದಾಗಿ ಹಿಂಸಾಚಾರದ ಘಟನೆಗಳು ನಡೆದಿವೆ.
ಉದ್ರಿಕ್ತ ಗುಂಪುಗಳು ನಿಂಗ್ಥೌಖಾಂಗ್ ನಲ್ಲಿ ಪಿಡಬ್ಲ್ಯುಡಿ ಸಚಿವ ಗೋವಿನ್ದಾಸ ಕೊಂಥೌಜಮ್,ಲಂಗಮೀಡಂಗ್ ಬಜಾರ್ನಲ್ಲಿ ಬಿಜೆಪಿ ಶಾಸಕ ವೈ.ರಾಧೇಶ್ಯಾಮ್,ಥೌಬಾಲ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಪಾವೊನಮ್ ಬ್ರೊಜೆನ್ ಹಾಗು ಇಂಫಾಲ ಪೂರ್ವ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ ಥೋಕ್ಚಾಮ್ ಲೋಕೇಶ್ವರ ಅವರ ನಿವಾಸಗಳಿಗೆ ಬೆಂಕಿ ಹಚ್ಚಿವೆ ಎಂದು ಅಧಿಕಾರಿಗಳು ತಿಳಿಸಿದರು.
ರವಿವಾರ ಬೆಳಿಗ್ಗೆ ಇಂಫಾಲ ಕಣಿವೆಯ ಎಲ್ಲ ಐದು ಜಿಲ್ಲೆಗಳಲ್ಲಿ ಉದ್ವಿಗ್ನ ವಾತಾವರಣವಿತ್ತು. ಈ ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದ್ದು,ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.