ಝಾನ್ಸಿ ಆಸ್ಪತ್ರೆ ಅಗ್ನಿ ಅವಘಡ: ಉಪ ಮುಖ್ಯಮಂತ್ರಿ ಭೇಟಿಗೆ ಮುನ್ನ ರಸ್ತೆಗೆ ಸುಣ್ಣದ ಗುರುತು, ವಿವಾದ ಸೃಷ್ಟಿ
ಝಾನ್ಸಿ(ಉತ್ತರ ಪ್ರದೇಶ): ಶುಕ್ರವಾರ ರಾತ್ರಿ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 10 ಶಿಶುಗಳ ಸಾವಿಗೆ ಸಾಕ್ಷಿಯಾಗಿದ್ದ ಇಲ್ಲಿಯ ಮಹಾರಾಣಿ ಝಾನ್ಸಿ ಲಕ್ಷ್ಮೀಬಾಯಿ ಮೆಡಿಕಲ್ ಕಾಲೇಜಿಗೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬೃಜೇಶ ಪಾಠಕ್ ಅವರ ಭೇಟಿಗೆ ಮುನ್ನ ರಸ್ತೆಗೆ ಸುಣ್ಣದ ಪುಡಿಯಿಂದ ಗುರುತು ಹಾಕಿದ್ದು ಭಾರೀ ವಿವಾದವನ್ನು ಸೃಷ್ಟಿಸಿದೆ.
ವಿಐಪಿಗಳ ರಸ್ತೆ ಸಂಚಾರದ ಸಂದರ್ಭದಲ್ಲಿ ರಸ್ತೆಯ ಬದಿಗಳಲ್ಲಿ ಸುಣ್ಣದಿಂದ ಗುರುತು ಹಾಕುವುದು ವಾಡಿಕೆಯ ಕ್ರಮವಾಗಿದೆ. ಆದರೆ ತಾನು ದುರಂತ ಸಂಭವಿಸಿದ್ದ ಆಸ್ಪತ್ರೆಗೆ ಭೇಟಿ ನೀಡುವಾಗ ರಸ್ತೆಗಳಲ್ಲಿ ಗುರುತು ಹಾಕಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪಾಠಕ್, ಈ ಕಾಮಗಾರಿಯನ್ನು ಮಾಡಿಸಿದವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ಪಾಠಕ್ ಅವರು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಜೊತೆ ಝಾನ್ಸಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದರು.
10 बच्चे जलकर मर गए।
— Congress (@INCIndia) November 16, 2024
BJP सरकार चेहरा चमकाने में लगी है।
शर्मनाक pic.twitter.com/Bk3tt3zoIl
ನವಜಾತ ಶಿಶುಗಳ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 10 ಶಿಶುಗಳು ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿರುವ 16 ಕಂದಮ್ಮಗಳು ಸಾವುಬದುಕಿನ ಹೋರಾಟವನ್ನು ನಡೆಸುತ್ತಿವೆ.
ಪಾಠಕ್ ಆಸ್ಪತ್ರೆ ಭೇಟಿಗೆ ಮುನ್ನ ಕೆಲವು ಕಾರ್ಮಿಕರು ರಸ್ತೆಯ ಬದಿಗಳಲ್ಲಿ ಸುಣ್ಣದ ಗುರುತು ಹಾಕುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.
‘ನಾನು ಝಾನ್ಸಿ ಮೆಡಿಕಲ್ ಕಾಲೇಜು ಆಸ್ಪತ್ರೆಯನ್ನು ತಲುಪುವ ಮುನ್ನ ಕೆಲವರು ರಸ್ತೆ ಬದಿಯಲ್ಲಿ ಸುಣ್ಣದ ಪುಡಿಯಿಂದ ಗುರುತುಗಳನ್ನು ಹಾಕುತ್ತಿದ್ದರು. ಸಂದರ್ಭವನ್ನು ಪರಿಗಣಿಸಿದರೆ ಇದು ವಿಷಾದನೀಯವಾಗಿದೆ. ಈ ಕೆಲಸವನ್ನು ಮಾಡಿಸಿದ ಅಧಿಕಾರಿಯ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವಂತೆ ನಾನು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಇದನ್ನು ನಾನೆಂದೂ ಒಪ್ಪುವುದಿಲ್ಲ’ ಎಂದು ಪಾಠಕ್ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.