ಮಣಿಪುರ: ಬೆತ್ತಲೆ ಮೆರವಣಿಗೆ ಪ್ರಕರಣದ ತನಿಖೆ ಸಿಬಿಐಗೆ ಹಸ್ತಾಂತರಿಸಲು ಕೇಂದ್ರ ನಿರ್ಧಾರ
ಹೊಸದಿಲ್ಲಿ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ, ವಿಡಿಯೋದಲ್ಲಿ ಚಿತ್ರೀಕರಿಸಿದ ಪ್ರಕರಣದ ವಿಚಾರಣೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ಹಸ್ತಾಂತರಿಸಲು ಕೇಂದ್ರ ಗೃಹ ಸಚಿವಾಲಯ ಗುರುವಾರ ನಿರ್ಧರಿಸಿದೆ.
ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ ಈ ಪ್ರಕರಣದ ನ್ಯಾಯಾಂಗ ವಿಚಾರಣೆಯನ್ನು ಮಣಿಪುರ ರಾಜ್ಯದಿಂದ ಹೊರಗೆ ವರ್ಗಾಯಿಸುವಂತೆ ಕೋರಿ ಕೇಂದ್ರ ಸರಕಾರವು ಅಫಿಡವಿಟ್ ಸಲ್ಲಿಸಲಿದೆ.
ವಿಡಿಯೋ ಚಿತ್ರೀಕರಿಸಲ್ಪಟ್ಟ ಮೊಬೈಲ್ ಪೋನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಚಿತ್ರೀಕರಣ ನಡೆಸಿದ ವ್ಯಕ್ತಿಯನ್ನು ಕೂಡಾ ಬಂಧಿಸಲಾಗಿದೆಯೆಂದು ಉನ್ನತ ಸರಕಾರಿ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ ಮಣಿಪುರದಲ್ಲಿ ಶಾಂತಿಸ್ಥಾಪನೆಯ ಪ್ರಯತ್ನವಾಗಿ ಕೇಂದ್ರ ಸರಕಾರವು ಕುಕಿ ಹಾಗೂ ಮೈತೈ ಸಮುದಾಯಗಳ ಸದಸ್ಯರ ಜೊತೆ ಹಲವಾರು ಸುತ್ತುಗಳ ಮಾತುಕತೆಗಳನ್ನು ನಡೆಸಿದೆ. ಪ್ರತಿಯೊಂದು ಸಮುದಾಯದವರ ಜೊತೆ ಆರು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಣಿಪುರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಉತ್ತಮಗೊಳ್ಳುತ್ತಿದೆ. ಯಾವುದೇ ಉದ್ವಿಗ್ನತೆ ಸೃಷ್ಟಿಯಾಗುವುದನ್ನು ತಡೆಯಲು ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದ್ದು, 35 ಸಾವಿರಕ್ಕೂ ಅಧಿಕ ಭದ್ರತಾಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.
ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಪ್ರಕರಣದಲ್ಲಿ ಓರ್ವ ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಹಿಂಸಾಚಾರ ಪೀಡಿತ ಮಣಿಪುರದ ಗ್ರಾಮವೊಂದರಲ್ಲಿ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಘಟನೆ ಮೇ 4ರಂದು ನಡೆದಿತ್ತೆನ್ನಲಾಗಿದೆ. ಜುಲೈ 19ರಂದು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ವ್ಯಾಪಕವಾಗಿ ಖಂಡನೆಗೊಳಗಾಗಿತ್ತು.