ಮಣಿಪುರ: ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯ ಜೀವಂತ ದಹನ
ಕಕ್ಚಿಂಗ್(ಮಣಿಪುರ): ಗುಂಪೊಂದು ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಒಂದು ದಿನಗಳ ಬಳಿಕ ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಊಹಿಸಲು ಸಾಧ್ಯವಾಗದ ಅಮಾನವೀಯ ಘಟನೆಗಳು ಬೆಳಕಿಗೆ ಬರುತ್ತಿವೆ.
ಕಕ್ಚಿಂಗ್ ಜಿಲ್ಲೆಯ ಸೆರೋವ್ ಗ್ರಾಮದಲ್ಲಿ ಶಸಸ್ತ್ರಧಾರಿಗಳ ಗುಂಪೊಂದು ಸ್ವಾತಂತ್ರ್ಯ ಹೋರಾಟಗಾರರೋರ್ವರ ೮೦ ವರ್ಷದ ಪತ್ನಿಯನ್ನು ಮನೆಯ ಒಳಗೆ ಕೂಡಿ ಹಾಕಿ ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿದೆ ಎಂದು ಸೆರೋವ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಎಫ್ಐಆರ್ನಲ್ಲಿ ಹೇಳಲಾಗಿದೆ.
ಸಾಮೂಹಿಕ ಹಿಂಸಾಚಾರ ಹಾಗೂ ಗುಂಡಿನ ಕಾಳಗ ನಡೆದ ಸೆರೋವ್ನಲ್ಲಿ ಮೇ ೨೮ರಂದು ಮುಂಜಾನೆ ಈ ಘಟನೆ ನಡೆದಿದೆ.
ಮಹಿಳೆಯರ ಪತಿ ಎಸ್. ಚುರಾಚಂದ್ ಸಿಂಗ್ ಅವರು ತಮ್ಮ ೮೦ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರನ್ನು ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರು ಕೂಡ ಗೌರವಿಸಿದ್ದರು.
ಗ್ರಾಮದ ಮೇಲೆ ದಾಳಿ ನಡೆಸಿದ ಶಶಸ್ತ್ರಧಾರಿಗಳ ಗುಂಪು ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯಾಗಿಯರುವ ೮೦ ವರ್ಷದ ಇಬೆತೊಂಬಿ ಮನೆಯಲ್ಲಿರುವಾಗ ಹೊರಗಿನಿಂದ ಚಿಲಕ ಹಾಕಿ ಬೆಂಕಿ ಹಚ್ಚಿದ್ದರು. ಅವರನ್ನು ರಕ್ಷಿಸಲು ಕುಟುಂಬದವರು ಆಗಮಿಸಿದ ಸಂದರ್ಭ ಮನೆ ಸಂಪೂರ್ಣ ಸುಟ್ಟು ಹೋಗಿತ್ತು ಎಂದು ಇಬೆತೊಂಬಿ ಅವರ ಮೊಮ್ಮಗ ಪ್ರೇಮಕಾಂತ್ ಹೇಳಿದ್ದಾರೆ.
ನಾನು ಅಜ್ಜಿಯನ್ನು ರಕ್ಷಿಸಲು ಪ್ರಯತ್ನಿಸಿದ ಸಂದರ್ಭ ಗುಂಡಿನ ದಾಳಿಯಿಂದ ಸ್ಪಲ್ಪದರಲ್ಲೇ ತಪ್ಪಿಸಿಕೊಂಡೆ ಎಂದು ಪ್ರೇಮಕಾಂತ್ ತಿಳಿಸಿದ್ದಾರೆ.