ಮಣಿಪುರ: 87 ಮಂದಿ ಕುಕಿ-ಝೋ ಸಂತ್ರಸ್ತರ ಸಾಮೂಹಿಕ ಅಂತ್ಯಸಂಸ್ಕಾರ

Update: 2023-12-21 04:23 GMT

Photo: twitter.com/MickyGupta84

ಗುವಾಹತಿ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ ಜೀವ ಕಳೆದುಕೊಂಡ 87 ಮಂದಿ ಕುಕಿ-ಝೋ ಸಮುದಾಯದ ಸಂತ್ರಸ್ತರ ಮೃತದೇಹಗಳನ್ನು ಬುಧವಾರ ಚುರಚಂನಪುರ ಜಿಲ್ಲೆಯಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಯಿತು.

ಈ ಸಂಸ್ಕಾರ ಕಾರ್ಯವನ್ನು ಕುಕಿ-ಝೋ ಹುತಾತ್ಮರ ಸ್ಮಶಾನದಲ್ಲಿ ಕ್ರಿಶ್ಚಿಯನ್ ವಿಧಿವಿಧಾನಗಳಿಗೆ ಅನುಸಾರವಾಗಿ ಮತ್ತು ಗ್ರಾಮ ರಕ್ಷಣಾ ಸ್ವಯಂ ಸೇವಕರ ಗೌರವದ ಮೂಲಕ ನಡೆಸಲಾಯಿತು. ಇದಕ್ಕೆ ಮುನ್ನ ತುಬಾಂಗ್ ನಲ್ಲಿ ಸಭೆ ನಡೆಯಿತು.

ಸಾವಿರಾರು ಮಂದಿ ಸಂತ್ರಸ್ತರ ಕುಟುಂಬಸ್ಥರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು. ಹಲವು ಭಾವನಾತ್ಮಕ ಚಿತ್ರಣಗಳು ಕಂಡುಬಂದವು. ಶವಪೆಟ್ಟಿಗೆಯನ್ನು ಸಾಂಪ್ರದಾಯಿಕ ಶಾಲುಗಳಿಂದ ಮುಚ್ಚಿ, ಗೋರಿಗಳಲ್ಲಿ ಇಡಲಾಯಿತು.

"ನಮ್ಮ ಹಲವು ಮಂದಿ ಸಹೋದರ ಸಹೋದರಿಯರ ಅಂತ್ಯಸಂಸ್ಕಾರವನ್ನು ಸಾಂಪ್ರದಾಯಿಕವಾಗಿ ನಡೆಸುವ ಮೂಲಕ ಇದೀಗ ನಿರಾಳರಾಗಿದ್ದೇವೆ. ತಮ್ಮ ಆಪ್ತರನ್ನು ಕಳೆದುಕೊಂಡ ಕುಟುಂಬ ಸದ್ಯಸರು ಸುಧೀರ್ಘ ಅವಧಿಯವರೆಗೆ ಕಾಯಬೇಕಾಯಿತು. ಇದೀಗ ಮೃತಪಟ್ಟವರಿಗೆ ನ್ಯಾಯ ದೊರಕಿಸಿಕೊಡುವ ಹೋರಾಟ ನಡೆಯಬೇಕಿದೆ ಮತ್ತು ಕುಕಿ-ಝೋ ಜನರಿಗೆ ಪ್ರತ್ಯೇಕ ಆಡಳಿತದ ಬೇಡಿಕೆ ಮುಂದುವರಿಯಲಿದೆ" ಎಂದು ಮಾನವಹಕ್ಕುಗಳಿಗಾಗಿ ಇರುವ ಕುಕಿ ಮಹಿಳಾ ಸಂಘಟನೆಯ ಅಧ್ಯಕ್ಷೆ ನೈನೇಕಿಮ್ ಹೇಳಿದರು.

ಈ ಕಾರ್ಯಕ್ರಮ ಅತ್ಯಂತ ಬಿಗಿ ಭದ್ರತೆಯಲ್ಲಿ ನಡೆದಿದ್ದು, ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ಫೆಬ್ರುವರಿ 18ರವರೆಗೆ ಕಫ್ರ್ಯೂ ಹೇರಲಾಗಿದೆ. ಕುಕಿ ಮತ್ತು ಝೋಮಿ ನಿವಾಸಿಗಳ ನಡುವೆ ನಡೆದ ಸಂಘರ್ಷದಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News