ಮಣಿಪುರ ಸಂಘರ್ಷ: ಮಿಝೋರಾಂ ಸುರಕ್ಷಿತವಲ್ಲವೆಂದು ರಾಜ್ಯ ತೊರೆಯುತ್ತಿರುವ ಮೈತೇಯಿ ಜನಾಂಗ
ಐಝೌಲ್: ಮಿಝೋರಾಂ ರಾಜ್ಯದಲ್ಲಿ ದುಡಿಯುತ್ತಿರುವ ಮೈತಿ ಸಮುದಾಯದ ಜನರು ರಾಜ್ಯವನ್ನು ತೊರೆಯುತ್ತಿದ್ದಾರೆ. ಜುಲೈ 22ರಂದು ಮಾಜಿ ತೀವ್ರವಾದಿ ಸಂಘಟನೆಯೊಂದು "ನಿಮ್ಮ ಸುರಕ್ಷತೆಗಾಗಿ ಮಿಝೋರಾಂ ತೊರೆಯಿರಿ" ಎಂದು ಎಚ್ಚರಿಸಿರುವ ಹಿನ್ನೆಲೆಯಲ್ಲಿ ಮಿಝೋರಾಂನಲ್ಲಿ ನೆಲೆಸಿದ್ದ ಮೈತೇಯಿ ಸಮುದಾಯದವರು ರಾಜ್ಯ ತೊರೆಯುತ್ತಿರುವುದಾಗಿ thehindu.com ವರದಿ ಮಾಡಿದೆ.
ಈ ಸಂಬಂಧ 'The Peace Accord MNF Returnees' Association' (PARMA) ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದು, "ಮಣಿಪುರದಲ್ಲಿ ದುಷ್ಕರ್ಮಿಗಳಿಂದ ನಡೆಯುತ್ತಿರುವ ಅಮಾನವೀಯ ಹಾಗೂ ನೀಚ ಕೃತ್ಯಗಳಿಂದ ಸಂಘರ್ಷ ಬಿಗಡಾಯಿಸುತ್ತಿದೆ, ಮಿಝೋರಾಂ ಇನ್ನು ಮುಂದೆ ಮೈತೇಯಿಗಳ ಪಾಲಿಗೆ ಸುರಕ್ಷಿತವಲ್ಲ" ಎಂದು ಹೇಳಿದೆ.
ಮಿಝೋಗಳು ಹಾಗು ಕುಕಿಗಳು ಮಯನ್ಮಾರ್ ಹಾಗೂ ಬಾಂಗ್ಲಾದೇಶದ ಕುಕಿಯ ಭಾಗವಾಗಿರುವುದರಿಂದ ಪರಸ್ಪರ ಜನಾಂಗೀಯ ಸಂಬಂಧ ಹೊಂದಿದ್ದಾರೆ.
ಮಿಝೋರಾಂ ವಿಮಾನ ಸಂಸ್ಥೆಗಳ ಅಧಿಕಾರಿಗಳ ಪ್ರಕಾರ, ಇಂಫಾಲದ ತುಲಿಹಾಲ್ ವಿಮಾನ ನಿಲ್ದಾಣಕ್ಕೆ ಸುಮಾರು 60 ಮಂದಿ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಅಲಯನ್ಸ್ ಏರ್ ಫ್ಲೈಟ್ ವಿಮಾನದ ಮೂಲಕ 56 ಮಂದಿ ಮೈತೇಯಿಗಳು ಮಿಝೋರಾಂನಿಂದ ಬಂದಿಳಿದಿದ್ದಾರೆ ಎಂದು ಇಂಫಾಲ ವಿಮಾನ ನಿಲ್ದಾಣ ಪ್ರಾಧಿಕಾರಗಳು ತಿಳಿಸಿವೆ. ಲೆಕ್ಕ ಸಿಗದಷ್ಟು ಸಂಖ್ಯೆಯ ಮೈತೇಯಿ ಜನರು ಐಝೌಲ್ ಹಾಗೂ ಮಿಝೋರಾಂನ ಇನ್ನಿತರ ಪ್ರದೇಶಗಳಿಂದ ಬಸ್ ಹಾಗೂ ಟ್ಯಾಕ್ಸಿಗಳ ಮೂಲಕ ರಾಜ್ಯ ತೊರೆದಿದ್ದಾರೆ ಎಂದು ಹೇಳಲಾಗಿದೆ.
ರಸ್ತೆ ಪ್ರಯಾಣವನ್ನು ತಪ್ಪಿಸಲು ಎನ್.ಬೀರೇನ್ ಸಿಂಗ್ ನೇತೃತ್ವದ ಸರ್ಕಾರವು ಮಿಝೋರಾಂನಲ್ಲಿ ನೆಲೆಸಿರುವವರನ್ನು ಏರ್‌ಲಿಫ್ಟ್ ಮೂಲಕ ಕರೆ ತರಲು ವ್ಯವಸ್ಥೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಣಿಪುರ ಸರ್ಕಾರದ ಪ್ರಕಾರ, ಮಿಝೋರಾಂ ವಿಶ್ವವಿದ್ಯಾಲಯದಲ್ಲಿರುವ ಉಪನ್ಯಾಸಕರೂ ಸೇರಿದಂತೆ ಸುಮಾರು 2,000 ಮೈತೇಯಿಗಳು ಮಿಝೋರಾಂನಲ್ಲಿ ವಾಸಿಸುತ್ತಿದ್ದಾರೆ. ಈ ಪೈಕಿ ಅರ್ಧ ಮಂದಿ ಮಣಿಪುರದವರಾಗಿದ್ದರೆ ಉಳಿದರ್ಧ ಮಂದಿ ದಕ್ಷಿಣ ಅಸ್ಸಾಂಗೆ ಸೇರಿದವರಾಗಿದ್ದಾರೆ.