ಮಣಿಪುರವನ್ನು ರಾಜಕೀಯಕ್ಕೆ ಬಳಸುತ್ತಿರುವುದು ನಾಚಿಕೆಗೇಡು: ಅಮಿತ್ ಶಾ
ಹೊಸದಿಲ್ಲಿ: ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ವಿಪಕ್ಷಗಳು ಚರ್ಚೆ ನಡೆಸಿದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರದ ಯೋಜನೆಗಳ ಮೇಲೆ ಕೇಂದ್ರೀಕರಿಸಿ ಭಾಷಣ ಮಾಡಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯವು ರಾಜಕೀಯ ಪ್ರೇರಿತ ಆಗಿರುವುದರಿಂದ ಸರ್ಕಾರದ ಸಾಧನೆಗಳ ಮೇಲೆ ಕೇಂದ್ರೀಕರಿಸಬೇಕಾಗಿದೆ ಎಂದು ಅಮಿತ್ ಶಾ ಹೇಳಿದರು.
ಮಣಿಪುರವನ್ನು ರಾಜಕೀಯಕ್ಕೆ ಬಳಸುತ್ತಿರುವುದು ನಾಚಿಕೆಗೇಡು ಎಂದು ಹೇಳಿದ ಅಮಿತ್ ಶಾ, “ಅವರು (ಕಾಂಗ್ರೆಸ್) ಈಶಾನ್ಯ (ಭಾರತ)ಕ್ಕೆ ಏನನ್ನೂ ಮಾಡಿಲ್ಲ, ನಾವು ಅದನ್ನು ಮಾಡಿದ್ದೇವೆ... ಯುಪಿಎ ಅಡಿಯಲ್ಲಿ 10 ವರ್ಷಗಳ ಕಾಲ ಏನೂ ಆಗಿಲ್ಲ. ಕಾಂಗ್ರೆಸ್ ಆಂತರಿಕ ಕಚ್ಚಾಟವನ್ನು ಮಾತ್ರ ಉತ್ತೇಜಿಸುತ್ತಿದೆ” ಎಂದು ಆರೋಪಿಸಿದರು.
"ಈಗ ಹಿಂಸಾಚಾರದ ಘಟನೆಗಳಲ್ಲಿ ಶೇಕಡಾ 68 ರಷ್ಟು ಕುಸಿತ ಕಂಡುಬಂದಿದೆ ಎಂದು ಹೇಳಿದ ಅವರು ಮೂಲಸೌಕರ್ಯದ ಅಭಿವೃದ್ಧಿ ಸಮಯಯವನ್ನು ಉಳಿತಾಯ ಮಾಡಿ, ದೂರವನ್ನು ಕಡಿಮೆ ಮಾಡಿದೆ. ಪ್ರಧಾನಿ ಮೋದಿ 9 ವರ್ಷಗಳಲ್ಲಿ 50 ಕ್ಕೂ ಹೆಚ್ಚು ಬಾರಿ ಈಶಾನ್ಯ ಭಾರತಕ್ಕೆ ಹೋಗಿದ್ದಾರೆ. ಅವರು ಈಶಾನ್ಯವನ್ನು ಭಾರತಕ್ಕೆ ಸಂಪರ್ಕಿಸಿದ್ದಾರೆ" ಎಂದು ಶಾ ಹೇಳಿದರು.
ಜನರನ್ನು ದಾರಿತಪ್ಪಿಸಲು ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿದೆ ಎಂದು ಆರೋಪಿಸಿದ ಅಮಿತ್ ಶಾ, 30 ವರ್ಷಗಳಿಂದ ದೇಶ ವಂಶಾಡಳಿತ, ಭ್ರಷ್ಟಾಚಾರ, ಜಾತೀಯತೆಯಿಂದ ನರಳುತ್ತಿದ್ದು, ಪ್ರಧಾನಿ ಮೋದಿ ಇದನ್ನೆಲ್ಲ ಮುಗಿಸಿ ದೇಶಕ್ಕೆ ಸಾಧನೆಯ ರಾಜಕಾರಣ ನೀಡಿದ್ದಾರೆ ಎಂದು ಹೇಳಿದ್ದಾರೆ.
"ಸ್ವಾತಂತ್ರ್ಯದ ನಂತರ, ಭಾರತವು ಸಂಪೂರ್ಣವಾಗಿ ನಂಬುವ ನಾಯಕರಿದ್ದರೆ ಅದು ಪ್ರಧಾನಿ ಮೋದಿ. ಈ ಅವಿಶ್ವಾಸ ನಿರ್ಣಯವು ಜನರ ಆಯ್ಕೆಯನ್ನು ಪ್ರತಿಬಿಂಬಿಸುವುದಿಲ್ಲ, ಅದನ್ನು ಅಡ್ಡಿಪಡಿಸಲು ಮಾತ್ರ ತರಲಾಗಿದೆ" ಎಂದು ಅವರು ಹೇಳಿದರು.