ಮಣಿಪುರ ಹಿಂಸಾಚಾರ; ಸಿಬಿಐ ಪ್ರಕರಣಗಳನ್ನು ಅಸ್ಸಾಮಿಗೆ ವರ್ಗಾಯಿಸಿದ ಸುಪ್ರೀಂ ಕೋಟ್
ಹೊಸದಿಲ್ಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣಗಳನ್ನು ಶುಕ್ರವಾರ ಅಸ್ಸಾಮಿಗೆ ವರ್ಗಾಯಿಸಿರುವ ಸರ್ವೋಚ್ಚ ನ್ಯಾಯಾಲಯವು,ವಿಚಾರಣೆಗಾಗಿ ನ್ಯಾಯಾಧೀಶರನ್ನು ನಾಮ ನಿರ್ದೇಶನ ಮಾಡುವಂತೆ ಗುವಾಹಟಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ (ಸಿಜೆ)ರಿಗೆ ಸೂಚಿಸಿದೆ.
ಆರೋಪಿಗಳನ್ನು ಅಸ್ಸಾಮಿನ ನ್ಯಾಯಾಲಯಗಳಿಗೆ ವರ್ಚುವಲ್ ಆಗಿ ಹಾಜರುಪಡಿಸಲಾಗುವುದು ಎಂದೂ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ತಿಳಿಸಿತು.
ಒಟ್ಟು 17 ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸಿದ್ದ ಕೇಂದ್ರ ಸರಕಾರವು, ವಿಚಾರಣೆಗಳನ್ನು ಮಣಿಪುರದಿಂದ ಹೊರಕ್ಕೆ ವರ್ಗಾಯಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಿಕೊಂಡಿತ್ತು. ದೋಷಾರೋಪ ಪಟ್ಟಿ ಸಲ್ಲಿಕೆಯಾದ ಆರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಬೇಕು ಎಂದೂ ಕೇಂದ್ರವು ಕಳೆದ ತಿಂಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಹೇಳಿತ್ತು.
ಆರಂಭದಲ್ಲಿ ಗುಂಪಿನಿಂದ ಇಬ್ಬರು ಬುಡಕಟ್ಟು ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣವನ್ನು ಮಾತ್ರ ಸಿಬಿಐಗೆ ಹಸ್ತಾಂತರಿಸಲಾಗಿತ್ತು,ಆದರೆ ಈ ಸಂಖ್ಯೆಯು ಕ್ರಮೇಣ ಈ ತಿಂಗಳು 17ಕ್ಕೇರಿದೆ. ಮೂವರು ಡಿಐಜಿಗಳು ಸೇರಿದಂತೆ 53 ಅಧಿಕಾರಿಗಳ ತಂಡವನ್ನು ಸಿಬಿಐ ನಿಯೋಜಿಸಿದೆ.
ಪ್ರಕರಣಗಳ ವಿಚಾರಣೆ ಅಸ್ಸಾಮಿನಲ್ಲಿ ನಡೆಯುತ್ತದೆ, ಆದರೆ ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರೆ ಅವರ ದೈಹಿಕ ಸಾಗಣೆಯನ್ನು ತಪ್ಪಿಸಲು ಮಣಿಪುರದಲ್ಲಿಯೇ ಅದನ್ನು ನಡೆಸಲಾಗುತ್ತದೆ. ಅಲ್ಲದೆ ಸಾಕ್ಷಿಗಳ ಹೇಳಿಕೆಗಳನ್ನು ಮಣಿಪುರದಲ್ಲಿ ದಾಖಲಿಸಿಕೊಳ್ಳಬಹುದು ಮತ್ತು ಇದಕ್ಕಾಗಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮ್ಯಾಜಿಸ್ಟ್ರೇಟ್‌ಗಳನ್ನು ನೇಮಕಗೊಳಿಸುತ್ತಾರೆ. ಮುಖ್ಯ ನ್ಯಾಯಾಧೀಶರು ಹೆಸರಿಸುವ ಸ್ಥಳೀಯ ಮ್ಯಾಜಿಸ್ಟ್ರೇಟ್ ಉಪಸ್ಥಿತಿಯಲ್ಲಿ ಆರೋಪಿಗಳ ಗುರುತು ಪತ್ತೆ ಪರೇಡ್‌ಗಳನ್ನು ನಡೆಸಲು ಅನುಮತಿಯಿದೆ ಎಂದು ನ್ಯಾ.ಚಂದ್ರಚೂಡ್ ನೇತೃತ್ವದ ಪೀಠವು ತಿಳಿಸಿತು.
ಸಿಬಿಐ ಪ್ರಕರಣಗಳಿಗೆ ಸಂಬಂಧಿಸಿದ ಸಂತ್ರಸ್ತರು,ಸಾಕ್ಷಿಗಳು ಮತ್ತು ಇತರರು ಆನ್‌ಲೈನ್ ಮೂಲಕ ಹಾಜರಾಗಲು ಬಯಸದಿದ್ದರೆ ನಿಯೋಜಿತ ಗುವಾಹಟಿ ನ್ಯಾಯಾಲಯದಲ್ಲಿ ಭೌತಿಕವಾಗಿ ಹಾಜರಾಗಲೂ ಸರ್ವೋಚ್ಚ ನ್ಯಾಯಾಲಯವು ಅನುಮತಿಸಿತು. ಗುವಾಹಟಿ ನ್ಯಾಯಾಲಯದಲ್ಲಿ ಆನ್‌ಲೈನ್ ಮೂಲಕ ಸಿಬಿಐ ಪ್ರಕರಣಗಳ ವಿಚಾರಣೆಗಳಿಗೆ ಅನುಕೂಲವಾಗಲು ಸೂಕ್ತ ಅಂತರ್ಜಾಲ ಸೇವೆಗಳನ್ನು ಒದಗಿಸುವಂತೆ ಅದು ಮಣಿಪುರ ಸರಕಾರಕ್ಕೂ ನಿರ್ದೇಶನ ನೀಡಿತು.