ಮಣಿಪುರ ಹಿಂಸಾಚಾರ: ವ್ಯಕ್ತಿಯ ಶಿರಚ್ಛೇಧದ ವೀಡಿಯೋ ವೈರಲ್
ಇಂಫಾಲ: ಮಣಿಪುರದ ಜನಾಂಗೀಯ ಸಂಘರ್ಷ ಬೂದಿಮುಚ್ಚಿದ ಕೆಂಡವಾಗಿರುವ ನಡುವೆಯೇ ಹಲವಾರು ಬರ್ಬರ ಕೃತ್ಯಗಳು ಬೆಳಕಿಗೆ ಬರುತ್ತಿವೆ. ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದರೆ, ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಶಿರಚ್ಛೇದ ಮಾಡಿರುವ ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ.
ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆಸಿದ ಘಟನೆ ಮೇ 4ರಂದು ನಡೆದಿದ್ದರೆ, ವ್ಯಕ್ತಿಯ ಶಿರಚ್ಛೇದನ ಜುಲೈ 2ರಂದು ನಡೆದಿದೆ ಎನ್ನಲಾಗಿದೆ. ಆದರೆ ಮುಂಡದಿಂದ ಬೇರ್ಪಟ್ಟಿರುವ ರುಂಡದ ಬಗೆಗಿನ ವಿಡಿಯೊ ಬಗ್ಗೆ ಅಥವಾ ತನಿಖೆಯ ಸ್ಥಿತಿಗತಿ ಬಗ್ಗೆ ಪೊಲೀಸರು ಇದುವರೆಗೂ ಬಾಯಿ ಬಿಟ್ಟಿಲ್ಲ. ಬುಡಕಟ್ಟು ಸಂಘಟನೆಗಳ ಸದಸ್ಯರು ಮೃತ ವ್ಯಕ್ತಿಯನ್ನು ಚುರಚಂದಾಪುರ ಗ್ರಾಮದ ಡೇವಿಡ್ ಥೀಕ್ ಎಂದು ಗುರುತಿಸಿದ್ದಾರೆ.
ಈ ಪ್ರಕರಣದಲ್ಲಿ ಥೀಕ್ ಕುಟುಂಬ ಸದಸ್ಯರಿಗೆ ನೆರವು ನೀಡುತ್ತಿರುವ ಮೇರಿ ಎಂಬ ಐಟಿಎಲ್ಎಫ್ (ಇಂಡೀಜೀನಿಯಸ್ ಟ್ರೈಬಲ್ ಲೀಡರ್ಸ್ ಫೋರಂ) ಕಾರ್ಯಕರ್ತೆ ಪ್ರಕಾರ, "ಸಂತ್ರಸ್ತ ವ್ಯಕ್ತಿ ಉದ್ಯೋಗಕ್ಕಾಗಿ ಮುಂಬೈಗೆ ಹೋಗಲು ಬಯಸಿದ್ದರು. ಆದರೆ ಮೇ 3ರಂದು ಆರಂಭವಾದ ಜನಾಂಗೀಯ ಸಂಘರ್ಷದ ಕಾರಣದಿಂದ ಸಿಕ್ಕಿಹಾಕಿಕೊಂಡಿದ್ದರು"
"ಹತ್ಯೆಗೀಡಾದ ವ್ಯಕ್ತಿ ಕುಟುಂಬದ ಏಕೈಕ ದುಡಿಯುವ ವ್ಯಕ್ತಿಯಾಗಿದ್ದರು. ಕೊರೋನಾ ಸಾಂಕ್ರಾಮಿಕದ ವರೆಗೆ ಮುಂಬೈ ಹೋಟೆಲ್ನಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದರು. 2020ರಲ್ಲಿ ಮಣಿಪುರಕ್ಕೆ ವಾಪಸ್ಸಾಗಿದ್ದರು. ಅಲ್ಲಿ ಉದ್ಯೋಗ ಕಳೆದುಕೊಂಡಿದ್ದರೇ ಎನ್ನುವುದು ಸ್ಪಷ್ಟವಾಗಿಲ್ಲ. ಮುಂಬೈಗೆ ಮರಳಲು ಯೋಚಿಸಿದ್ದರು. ಆದರೆ ಸಂಘರ್ಷದ ಕಾರಣದಿಂದ ಉಳಿದಿದ್ದರು ಎಂದು ಅವರ ಕುಟುಂಬದವರು ಮಾಹಿತಿ ನೀಡಿದ್ದಾರೆ. ಸಂತ್ರಸ್ತ ವ್ಯಕ್ತಿಯ ತಂದೆ ಅಂಗವಿಕಲರಾಗಿದ್ದು, ತಾಯಿ ಬಹಳಷ್ಟು ಹಿಂದೆಯೇ ಮೃತಪಟ್ಟಿದ್ದರು. ಈ ವ್ಯಕ್ತಿ ಹಾಗೂ ತಮ್ಮ ಇಬ್ಬರೂ ಅರ್ಧದಲ್ಲೇ ಶಾಲೆ ಬಿಟ್ಟಿದ್ದರು" ಎಂದು ಮೇರಿ ವಿವರಿಸಿದ್ದಾರೆ.
ಸ್ವಯಂಸೇವಕರಾಗಿ ಕಾವಲು ನಡೆಸುತ್ತಿದ್ದ ಥೀಕ್ ಮೇಲೆ ಜುಲೈ 2ರಂದು ಬೆಳಿಗ್ಗೆ 5 ಗಂಟೆಯ ವೇಳೆಗೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಗುಂಪು ದಾಳಿ ನಡೆಸಿದ್ದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.