ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟಕ್ಕೆ ಮರಾಠರು ಪಾಠ ಕಲಿಸಲಿದ್ದಾರೆ: ಮರಾಠಾ ಹೋರಾಟಗಾರ ಮನೋಜ್ ಜಾರಂಗೆ
ಮುಂಬೈ: ತಮಗೆ ಮೀಸಲಾತಿಯನ್ನು ನಿರಾಕರಿಸಿ ಪ್ರತಿಭಟನಾಕಾರರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುತ್ತಿರುವ ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟಕ್ಕೆ ಸಮುದಾಯವು ಪಾಠ ಕಲಿಸಲಿದೆ ಎಂದು ಮರಾಠಾ ಹೋರಾಟಗಾರ ಮನೋಜ್ ಜಾರಂಗೆ-ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಮತ್ತು ಮುಖ್ಯಮಂತ್ರಿ ಏಕನಾಥ ಶಿಂದೆಯವರ ಶಿವಸೇನೆ ಬಣದ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿದೆ.
ಸರಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮರಾಠರಿಗೆ ಮೀಸಲಾತಿಯ ಬೇಡಿಕೆಯೊಂದಿಗೆ ಪಾಟೀಲ್ ಆಗಸ್ಟ್‌ನಿಂದ ಫೆಬ್ರವರಿ ನಡುವೆ ನಾಲ್ಕು ಸಲ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಶನಿವಾರ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪಾಟೀಲ್, ‘ಕಳೆದ ವರ್ಷದ ಪ್ರತಿಭಟನೆ ಸಂದರ್ಭದಲ್ಲಿ ರಸ್ತೆ ತಡೆಗಳನ್ನು ಮತ್ತು ಶಾಂತಿಯುತ ಪ್ರದರ್ಶನ ನಡೆಸಿದ್ದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇದು ಗೃಹ ಇಲಾಖೆಯ ದುರುಪಯೋಗವಾಗಿದೆ. ಮರಾಠಾ ಸಮುದಾಯವು ಇದನ್ನು ಸಹಿಸುವುದಿಲ್ಲ. ನಾವು ಖಂಡಿತವಾಗಿಯೂ ಅವರಿಗೆ ಪಾಠವನ್ನು ಕಲಿಸುತ್ತೆವೆ ’ಎಂದು ಹೇಳಿದರು.
‘ಮರಾಠರ ಸಿಟ್ಟು ಮತ್ತು ಒಗ್ಗಟ್ಟಿನಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರದಲ್ಲಿ ವ್ಯಾಪಕ ಪ್ರಚಾರ ನಡೆಸುವಂತಾಗಿತ್ತು. ಅವರು ಬಹಳಷ್ಟು ರ್ಯಾಲಿಗಳನ್ನು ನಡೆಸಬೇಕಾಯಿತು ಮತ್ತು ಇಲ್ಲಿಯೇ ಉಳಿದುಕೊಳ್ಳುವಂತಾಗಿತ್ತು. ಬಡ ಮರಾಠರು ಒಗ್ಗಟ್ಟಾಗಿದ್ದು ಇದಕ್ಕೆ ಕಾರಣವಾಗಿತ್ತು,ಇದು ನಮ್ಮ ಒಗ್ಗಟ್ಟಿನ ಭಯವಾಗಿತ್ತು’ ಎಂದ ಪಾಟೀಲ್,ಪ್ರತಿಪಕ್ಷ ಮಹಾ ವಿಕಾಸ ಅಘಾಡಿ (ಎಂವಿಎ)ಯಿಂದಲೂ ಮರಾಠರು ಅನ್ಯಾಯವನ್ನು ಎದುರಿಸುತ್ತಿದ್ದಾರೆ. ಎಂವಿಎ ಪಾಲುದಾರರಾದ ಕಾಂಗ್ರೆಸ್ ಮತ್ತು ಎನ್‌ಸಿಪಿಗಳು ಈ ಹಿಂದೆ ದೀರ್ಘಕಾಲ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದವು,ಆದರೆ ಮರಾಠಾ ಸಮುದಾಯಕ್ಕೆ ಮೀಸಲಾತಿಯನ್ನು ನೀಡಲಿಲ್ಲ ಎಂದು ಆರೋಪಿಸಿದರು.
ಮಹಾರಾಷ್ಟ್ರ ಶಾಸಕಾಂಗವು ಸರಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮರಾಠಾ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿಯನ್ನು ಒದಗಿಸುವ ಮಸೂದೆಯನ್ನು ಅಂಗೀಕರಿಸಿದ ಆರು ದಿನಗಳ ಬಳಿಕ ಫೆ.26ರಂದು ಪಾಟೀಲ್ ತನ್ನ ನಾಲ್ಕನೆಯ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದರು.
ಈ ಕೋಟಾ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಸೇರಿದಂತೆ ರಾಜ್ಯದಲ್ಲಿಯ ಪ್ರಸ್ತುತ ಶೇ.52ರಷ್ಟು ಮೀಸಲಾತಿಗೆ ಹೆಚ್ಚುವರಿಯಾಗಲಿದೆ.
ಆದರೆ ಪ್ರತ್ಯೇಕ ಮೀಸಲಾತಿಯು ಶೇ.50ರ ಸಾಂವಿಧಾನಿಕ ಮಿತಿಯನ್ನು ಮೀರುತ್ತದೆ ಮತ್ತು ನ್ಯಾಯಾಂಗವು ಅದನ್ನು ರದ್ದುಗೊಳಿಸುತ್ತದೆ, ಹೀಗಾಗಿ ಮರಾಠರಿಗೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಡಿ ಮಾತ್ರ ಮೀಸಲಾತಿ ನೀಡಬೇಕು ಎಂದು ಪಾಟೀಲ್ ಒತ್ತಾಯಿಸಿದ್ದಾರೆ.