ಭಾರತದಲ್ಲಿ ಸಿಡಿಲಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಭಾರೀ ಏರಿಕೆ : ಅಧ್ಯಯನ ವರದಿ

Update: 2024-08-15 16:41 GMT

   ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ದಳದ ದತ್ತಾಂಶ ವಿಶ್ಲೇಷಣೆಯ ಪ್ರಕಾರ, 2010-20ರ ನಡುವಿನ ದಶಕದಲ್ಲಿ ಸಿಡಿಲಿನಿಂದ ಮೃತಪಟ್ಟ ಘಟನೆಗಳ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗಿದೆ.

1967-2002ರವರೆಗೆ ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 38 ಇದ್ದ ಸರಾಸರಿ ಮರಣದ ಪ್ರಮಾಣವು, 2003-2020ರ ಅವಧಿಯ ನಡುವೆ 61ಕ್ಕೆ ಏರಿಕೆಯಾಗಿದೆ ಎಂಬುದು ದತ್ತಾಂಶದಿಂದ ಕಂಡು ಬಂದಿದೆ.

ಇದರೊಂದಿಗೆ ಭಾರತದಲ್ಲಿ ಸಿಡಿಲಿನಿಂದ ಮೃತಪಟ್ಟವರ ಪ್ರಮಾಣ 1986ರಲ್ಲಿ 28 ಇದ್ದದ್ದು, 2016ರಲ್ಲಿ 81ಕ್ಕೆ ಏರಿಕೆಯಾಗಿದ್ದು, ಇದು ಮೂರು ಪಟ್ಟು ಹೆಚ್ಚು ಎಂದು ಹೇಳಲಾಗಿದೆ.

ಒಡಿಶಾದ ಫಕೀರ್ ಮೋಹನ್ ವಿಶ್ವವಿದ್ಯಾಲಯ ಸೇರಿದಂತೆ ಸಂಶೋಧಕರ ತಂಡವೊಂದು 1967ರಿಂದ 2020ರ ನಡುವೆ ಸಿಡಿಲಿನಿಂದ ಒಟ್ಟು 1,01,309 ಮರಣಗಳಾಗಿರುವುದನ್ನು ಪತ್ತೆ ಹಚ್ಚಿದೆ. ಈ ಪೈಕಿ 2010-2020ರ ನಡುವಿನ ಅವಧಿಯಲ್ಲಿ ಅಪಾಯಕಾರಿ ಮಟ್ಟದಲ್ಲಿ ಮರಣ ಪ್ರಮಾಣ ಏರಿಕೆಯಾಗಿರುವುದು ಕಂಡು ಬಂದಿದೆ.

ಪರಿಸರ, ಅಭಿವೃದ್ಧಿ ಹಾಗೂ ಸುಸ್ಥಿರತೆ ವಾರ್ತಾಪತ್ರದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ, “ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1967ರಿಂದ 2002ರ ನಡುವೆ 38ರಷ್ಟಿದ್ದ ವಾರ್ಷಿಕ ಸರಾಸರಿ ಮರಣ ಪ್ರಮಾಣವು 2003-2020ರ ನಡುವೆ 61ಕ್ಕೆ ಏರಿಕೆಯಾಗಿರುವುದು ದತ್ತಾಂಶಗಳಲ್ಲಿ ಕಂಡು ಬಂದಿದೆ. ಗಮನಾರ್ಹ ಸಂಗತಿಯೆಂದರೆ, 2010-2020ರ ನಡುವಿನ ಅವಧಿಯು ಅತ್ಯಂತ ಮಾರಣಾಂತಿಕ ಸಿಡಿಲಿನ ಘಟನೆಗಳ ಅವಧಿಯಾಗಿ ಉದ್ಭವಿಸಿದೆ” ಎಂದು ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ.

“ಇದು ವಾರ್ಷಿಕ ಸರಾಸರಿ 1,876 ಮರಣಗಳಾಗಿವೆ. ದೀರ್ಘಕಾಲೀನ ರಾಷ್ಟ್ರೀಯ ಸರಾಸರಿ ಮರಣ ಸಂಖ್ಯೆಯ ಪ್ರಮಾಣವು ಪ್ರತಿ ರಾಜ್ಯ ಕೇಂದ್ರಾಡಳಿತ ಪ್ರದೇಶದಲ್ಲಿ 46ರಷ್ಟಿದ್ದು, 1986ರಲ್ಲಿ 28 ಇದ್ದದ್ದು, 2016ರಲ್ಲಿ 81ಕ್ಕೆ ಏರಿಕೆಯಾಗಿದೆ” ಎಂದೂ ಅವರು ಹೇಳಿದ್ದಾರೆ.

ಮುಂಬರುವ ವರ್ಷಗಳಲ್ಲಿ ದೇಶದಲ್ಲಿ ಈ ಪರಿಸ್ಥಿತಿಯನ್ನು ಮತ್ತಷ್ಟು ವಿಷಮಿಸುವ ಸಾಧ್ಯತೆ ಇರುವ ಹವಾಮಾನ ಬದಲಾವಣೆಯ ಈ ತೀವ್ರ ಸ್ವರೂಪದ ಚಾಲಕ ಶಕ್ತಿಯಾಗಿರುವ ಸಾಧ್ಯತೆ ಇದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ರಾಜ್ಯ ಮತ್ತು ಪ್ರಾಂತೀಯ ಹಂತದಲ್ಲಿರುವ ಸೂಕ್ಷ್ಮ ಪ್ರವೃತ್ತಿಗಳ ಪ್ರಕಾರ, ಸಿಡಿಲಿನಿಂದಾಗುವ ಮರಣ ಪ್ರಮಾಣ ಮಧ್ಯಪ್ರದೇಶದಲ್ಲಿ ಅತ್ಯಧಿಕವಾಗಿದ್ದು, ಇದಾದ ನಂತರ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಒಡಿಶಾ ರಾಜ್ಯಗಳಿವೆ ಎಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಆದರೆ, ಪ್ರತಿ 1,000 ಕಿಮೀ ವ್ಯಾಪ್ತಿಯಲ್ಲಿ ಸಂಭವಿಸುತ್ತಿರುವ ಮರಣಗಳ ಪ್ರಮಾಣವು ದೊಡ್ಡ ರಾಜ್ಯಗಳಿಗೆ ಹೋಲಿಸಿದರೆ, ಸಾಕಷ್ಟು ಕಿರಿದಾಗಿರುವ ಬಿಹಾರ (79 ಮರಣಗಳು), ಪಶ್ಚಿಮ ಬಂಗಾಳ (76) ಹಾಗೂ ಜಾರ್ಖಂಡ್ (42) ರಾಜ್ಯಗಳಲ್ಲಿವೆ ಎಂದು ಸಂಶೋಧಕರು ಹೇಳಿದ್ದಾರೆ.

1967ರಲ್ಲಿ ಸಿಡಿಲಿನ ಮರಣಗಳ ದಾಖಲೀಕರಣ ಪ್ರಾರಂಭಗೊಂಡಾಗಿನಿಂದ ಮಧ್ಯ ಭಾರತ ಪ್ರಾಂತ್ಯದಲ್ಲಿ ಸಿಡಿಲಿನಿಂದ ಆಗುವ ಮರಣಗಳ ಪ್ರಮಾಣದಲ್ಲಿ ನಿರಂತರವಾಗಿ ಏರಿಕೆಯಾಗಿದೆ ಎಂದು ಲೇಖಕರು ಪತ್ತೆ ಹಚ್ಚಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News