ಸಾಮಾಜಿಕ ಮಾಧ್ಯಮ ಪೋಸ್ಟ್‌ ಅನ್ನು ಕೇವಲ ಲೈಕ್ ಮಾಡುವುದು ಐಟಿ ಕಾಯ್ದೆಯಡಿ ಅಪರಾಧವಲ್ಲ: ಬಾಂಬೆ ಹೈಕೋರ್ಟ್

Update: 2023-10-28 17:23 GMT

Photo: Canva

ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳಲ್ಲಿಯ ಪೋಸ್ಟ್‌ನ್ನು ಕೇವಲ ಲೈಕ್ ಮಾಡುವುದು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಕಲಂ 67ರಡಿ ಅಪರಾಧವಾಗುವುದಿಲ್ಲ ಎಂದು ಬಾಂಬೆ ಉಚ್ಚ ನ್ಯಾಯಾಲಯವು ಅಭಿಪ್ರಾಯಿಸಿದೆ.

ಆದರೂ ,ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದು ಅಥವಾ ಮರುಟ್ವೀಟಿಸುವುದು ಈ ಕಲಮ್‌ನಡಿ ‘ಪ್ರಸಾರ’ ವಾಗುತ್ತದೆ ಎಂದು ಉಚ್ಚ ನ್ಯಾಯಾಲಯವು ಹೇಳಿದೆ.

ಐಟಿ ಕಾಯ್ದೆಯ ಕಲಂ 67 ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ವಿಷಯದ ಪ್ರಕಟಣೆ ಅಥವಾ ಪ್ರಸಾರಕ್ಕಾಗಿ ದಂಡನೆಗೆ ಸಂಬಂಧಿಸಿದೆ.

ಅನುಮತಿಯಿರದಿದ್ದ ಮೆರವಣಿಗೆಯೊಂದಕ್ಕೆ 500ಕ್ಕೂ ಅಧಿಕ ಮುಸ್ಲಿಮರು ಸಮಾವೇಶಗೊಳ್ಳಲು ಕಾರಣವಾಗಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಮಾಡಿದ್ದ ತನ್ನ ವಿರುದ್ಧದ ಆರೋಪಗಳನ್ನು ರದ್ದುಗೊಳಿಸುವಂತೆ ಮುಹಮ್ಮದ್ ಇಮ್ರಾನ್ ಎನ್ನುವವರು ಸಲ್ಲಿಸಿದ್ದ ಅರ್ಜಿಯ ಕುರಿತು ಅ.18ರಂದು ಉಚ್ಚ ನ್ಯಾಯಾಲಯವು ತನ್ನ ಆದೇಶವನ್ನು ಹೊರಡಿಸಿದೆ. ಮೆರವಣಿಗೆಯು ಶಾಂತಿ ಮತ್ತು ಭದ್ರತೆಗೆ ಬೆದರಿಕೆಯೊಡ್ಡಿತ್ತು ಎಂದು ಪೋಲಿಸರು ಆರೋಪಿಸಿದ್ದಾರೆ.

ತನ್ನ ಕಕ್ಷಿದಾರರು ಅಪರಾಧವನ್ನು ಎಸಗಿದ್ದಾರೆ ಎಂದು ತೋರಿಸುವ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಇಮ್ರಾನ್ ಪರ ವಕೀಲರು ವಾದಿಸಿದರು.

ಜನರ ಸಮಾವೇಶಕ್ಕೆ ಕರೆ ನೀಡಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್‌ನ್ನು ಕಾಜಿ ಲೈಕ್ ಮಾಡಿದ್ದರು ಎಂದು ತನಿಖಾಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಇಮ್ರಾನ್ ಅವರು ಪೋಸ್ಟ್‌ನ್ನು ಸೃಷ್ಟಿಸಿದ್ದರು ಅಥವಾ ಹಂಚಿಕೊಂಡಿದ್ದರು ಎನ್ನುವುದನ್ನು ತೋರಿಸುವ ಯಾವುದೇ ಸಾಕ್ಷ್ಯಾಧಾರವನ್ನು ಒದಗಿಸಲು ಅವರು ವಿಫಲರಾದರು.

ಆದರೆ,ಸಾಮಾಜಿಕ ಮಾಧ್ಯಮ ಪೋಸ್ಟ್‌ನ್ನು ಕೇವಲ ಲೈಕ್ ಮಾಡುವುದು ಐಟಿ ಕಾಯ್ದೆಯ ಕಲಂ 67ರಡಿ ಅಪರಾಧವಾಗುವುದಿಲ್ಲ ಎಂದು ಹೇಳಿದ ಉಚ್ಚ ನ್ಯಾಯಾಲಯವು, ಈ ಕಲಂ ಅಶ್ಲೀಲ ಪೋಸ್ಟ್‌ಗಳಿಗಾಗಿದೆಯೇ ಹೊರತು ಪ್ರಚೋದನಕಾರಿ ವಿಷಯಗಳಿಗಲ್ಲ ಎಂದೂ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News