ಹಿಂದಿಯಲ್ಲೂ ಮೆಟಾ ಎಐ ಲಭ್ಯ
ಹೊಸದಿಲ್ಲಿ: ಕೃತಕ ಬುದ್ದಿಮತ್ತೆ ಆ್ಯಪ್ ಮೆಟಾ ಎಐ ಇನ್ನು ಮುಂದೆ ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ಲಭ್ಯವಾಗಲಿದೆ. ಈವರೆಗೆ ಇಂಗ್ಲೀಷ್‌ನಲ್ಲಿ ಮಾತ್ರವೇ ಲಭ್ಯವಿದ್ದ ಮೆಟಾ ಎಐ, ಇನ್ನು ಹಿಂದಿ, ಜರ್ಮನ್, ಫ್ರೆಂಚ್, ಇಟಾಲಿಯಾನ್, ಪೋರ್ಚುಗೀಸ್ ಹಾಗೂ ಸ್ಪಾನಿಶ್ ಭಾಷೆಗಳಲ್ಲಿಯೂ ಸಂವಹನ ನಡೆಸಲಿದೆ ಎಂದು ಸಾಮಾಜಿಕ ಮಾಧ್ಯಮ ದಿಗ್ಗ ಮೆಟಾ ಪ್ರಕಟಣೆಯೊಂದರಲ್ಲಿ ತಿಳಿಸಿದೆ.
ಇದರೊಂದಿಗೆ ಮೆಟಾ ಎಐನ ಸಾಮರ್ಥ್ಯವು ಬಹುಭಾಷಾ ಸ್ತರಗಳಿಗೆ ವಿಸ್ತರಣೆಯಾಗಲಿದೆ. ಮೆಟಾ ಎಐ ಇನ್ನು ಮುಂದೆ ವಾಟ್ಸ್ಆಪ್, ಇನ್‌ಸ್ಟಾಗ್ರಾಂ, ಮೆಸ್ಸೆಂಜರ್ ಹಾಗೂ ಫೇಸ್‌ಬುಕ್‌ಗಳಲ್ಲಿ ಈ ಭಾಷೆಗಳಲ್ಲಿ ಲಭ್ಯವಾಗಲಿದೆ.
ಗಣಿತ ಹಾಗೂ ಕೋಡಿಂಗ್‌ನಂತಹ ವಿಷಯಗಳಲ್ಲಿನ ಸಂಕೀರ್ಣ ಪ್ರಶ್ನೆಗಳಿಗೆ ಹಿಂದಿಯಲ್ಲಿ ಉತ್ತರಿಸಲು ಅದು ನೆರವಾಗಲಿದೆ .
ಇದರೊಂದಿಗೆ ಕೃತಕ ಬುದ್ಧಿಮತ್ತೆ ಆಧಾರಿತವಾಗಿ ಬೆಳೆಯುತ್ತಿರುವ ತಂತ್ರಜ್ಞಾನದೆಡೆಗೆ ಮೆಟಾ ಎಐ ತನ್ನ ಉಪಸ್ಥಿತಿಯನ್ನು ಇನ್ನಷ್ಟು ವಿಸ್ತರಿಸಿದಂತಾಗಿದೆ.
ಮೆಟಾ ಎಐನಲ್ಲಿ ಬಳಕೆದಾರರಿಗೆ ಉತ್ತರಿಸಲು, ಐಡಿಯಾಗಳನ್ನು ನೀಡಲು ಹಾಗೂ ಸ್ಫೂರ್ತಿಯನ್ನು ಮೂಡಿಸಲು ನೆರವಾಗುವಂತಹ ನೂತನ ಫೀಚರ್‌ಗಳನ್ನು ಪರಿಚಯಿಸುವುದಾಗಿಯೂ ಮೆಟಾ ತಿಳಿಸಿದೆ.
ಮೆಟಾ ಎಐ ಈಗ ಭಾರತ ಸೇರಿದಂತೆ 22 ದೇಶಗಳಲ್ಲಿ ಲಭ್ಯವಿದೆ. ಅರ್ಜೆಂಟೀನಾ, ಚಿಲಿ, ಕೊಲಂಬಿಯಾ, ಇಕ್ವೆಡಾರ್, ಮೆಕ್ಸಿಕೊ,ಪೆರು ಹಾಗೂ ಕ್ಯಾಮರೂನ್ ದೇಶಗಳು ಹೊಸದಾಗಿ ಸೇರ್ಪಡೆಗೊಂಡಿದೆ.