ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಪ್ರಕರಣ | ಪೊಕ್ಸೊ ದಾಖಲಾಗುವುದಕ್ಕೂ ಮುನ್ನವೇ ಕ್ರಮಕ್ಕೆ ಆಗ್ರಹಿಸಿದ್ದ ಗೃಹಸಚಿವಾಲಯ!

Update: 2024-06-28 15:24 GMT

ಯಡಿಯೂರಪ್ಪ | PTI 

ಹೊಸದಿಲ್ಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ಅವರ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿಕೊಳ್ಳುವುದಕ್ಕೂ ಮುನ್ನ, ಕೇಂದ್ರ ಗೃಹ ಸಚಿವಾಲಯವು ಕರ್ನಾಟಕ ಸರಕಾರಕ್ಕೆ ಪತ್ರ ಬರೆದು, ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವುದು ಮಹತ್ವ ಪಡೆದುಕೊಂಡಿದೆ.

ಇತ್ತೀಚೆಗೆ ಬಯಲಾಗಿರುವ ದಾಖಲೆಗಳ ಪ್ರಕಾರ, ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಕರ್ನಾಟಕ ಪೊಲೀಸರು ಪೊಕ್ಸೊ ಪ್ರಕರಣ ದಾಖಲಿಸಿಕೊಳ್ಳುವುದಕ್ಕೂ ಮುನ್ನವೇ ಮಧ್ಯಪ್ರವೇಶಿಸಿರುವ ಕೇಂದ್ರ ಗೃಹ ಸಚಿವಾಲಯವು, ಈ ಪ್ರಕರಣದಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಿರುವುದು ಬಹಿರಂಗಗೊಂಡಿದೆ.

ಫೆಬ್ರವರಿ 23, 2024ರಂದು ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿರುವ ದೂರುದಾರೆ, ತಮ್ಮ ಪುತ್ರಿಯ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಕುರಿತು ವಿಸ್ತೃತವಾಗಿ ವಿವರಿಸಿದ್ದರು. ಈ ಪತ್ರವನ್ನು ಫೆಬ್ರವರಿ 29ರಂದು ಕರ್ನಾಟಕ ಸರಕಾರಕ್ಕೆ ರವಾನಿಸಿರುವ ಕೇಂದ್ರ ಗೃಹ ಸಚಿವಾಲಯವು, ಈ ಕುರಿತು ತೆಗೆದುಕೊಂಡಿರುವ ಕ್ರಮದ ವರದಿಯನ್ನು ಸಲ್ಲಿಸುವಂತೆ ಸೂಚಿಸಿತ್ತು. ಇದರ ಬೆನ್ನಿಗೇ ಮಾರ್ಚ್ 21ರಂದು ಯಡಿಯೂರಪ್ಪನವರ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗಿತ್ತು.

ಯಡಿಯೂರಪ್ಪ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರುದಾರೆ ಹಾಗೂ ಅವರ ಕುಟುಂಬದ ಸದಸ್ಯರು ಆರೋಪಿಸಿರುವುದರಿಂದ ಈ ಪತ್ರವು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ದೂರುದಾರೆಯ ಪ್ರಕಾರ, ಅವರು ತಮ್ಮ ಪುತ್ರಿಯೊಂದಿಗೆ ಫೆಬ್ರವರಿ 2ರಂದು ಡಾಲರ್ಸ್ ಕಾಲನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಈ ಹಿಂದೆ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ ನೆರವು ನೀಡುವಂತೆ ಕೋರಿಕೊಳ್ಳಲು ಭೇಟಿ ನೀಡಿದ್ದರು. 2015ರಲ್ಲಿ ದೂರುದಾರೆಯ ಪುತ್ರಿಯ ಮೇಲೆ ಅವರ ಸೋದರ ಸಂಬಂಧಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಪ್ರಕರಣವು ನಿಧಾನ ಗತಿಯಲ್ಲಿ ನಡೆಯುತ್ತಿತ್ತು. ಈ ಘಟನೆಯನ್ನು ತನ್ನ ಪುತ್ರಿಯು ವಿವರಿಸುವಾಗ ಆಕೆಗೆ ಮತ್ತೊಂದು ಕೊಠಡಿಗೆ ತೆರಳುವಂತೆ ಸೂಚಿಸಿದ್ದ ಯಡಿಯೂರಪ್ಪ, ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ಈ ಪತ್ರವು ದೂರೊಂದಕ್ಕೆ ಕೇಂದ್ರ ಗೃಹ ಸಚಿವಾಲಯವು ನೀಡುವ ದೈನಂದಿನ ಪ್ರತಿಕ್ರಿಯೆಯಂತೆ ಕಂಡು ಬಂದರೂ, ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳಿರುವಾಗ ಅಮಿತ್ ಶಾ ಅಧೀನದಲ್ಲಿನ ಕೇಂದ್ರ ಗೃಹ ಸಚಿವಾಲಯವು ಇಂತಹ ಪತ್ರ ಬರೆದಿರುವುದು ಮಹತ್ವ ಪಡೆದುಕೊಂಡಿದೆ.

ಕರ್ನಾಟಕ ಮುಖ್ಯಮಂತ್ರಿ ಕಚೇರಿಯಲ್ಲಿನ ಮೂಲಗಳು ಈ ಸಂಗತಿಯನ್ನು thenewsminute.com ಸುದ್ದಿ ಸಂಸ್ಥೆಗೆ ದೃಢಪಡಿಸಿವೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯದಿಂದ ಪೊಲೀಸ್ ಮಹಾ ನಿರ್ದೇಶಕರು ಪತ್ರವೊಂದನ್ನು ಸ್ವೀಕರಿಸಿದ್ದು, ಈ ಘಟನೆಯ ಸಂಬಂಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಉತ್ತರವನ್ನು ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ ಎನ್ನಲಾಗಿದೆ.

ಸೌಜನ್ಯ : thenewsminute.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News