ದಾರಿ ತಪ್ಪಿಸುವ ಜಾಹೀರಾತು : ಪತಂಜಲಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಿಎಂಒ ನಿರ್ದೇಶ
ಹೊಸದಿಲ್ಲಿ: ಆಯುಷ್ ಉತ್ಪನ್ನಗಳ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ನಿಯಂತ್ರಿಸುವ ಕಾಯ್ದೆಯನ್ನು ಮತ್ತೆ ಮತ್ತೆ ಉಲ್ಲಂಘಿಸಿರುವುದಕ್ಕಾಗಿ ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದದ ವಿರುದ್ಧದ ದೂರಿನ ಕುರಿತು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ಮಂತ್ರಿ ಕಚೇರಿ ಆಯುಷ್ ಸಚಿವಾಲಯಕ್ಕೆ ನಿರ್ದೇಶಿಸಿದೆ.
ಪ್ರಧಾನ ಮಂತ್ರಿ ಕಚೇರಿ ಜನವರಿ 24ರಂದು ಆಯುಷ್ ಸಚಿವಾಲಯಕ್ಕೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಸಚಿವಾಲಯ 2022 ಫೆಬ್ರವರಿಯಿಂದ ಬಾಕಿ ಉಳಿದಿರುವ ಈ ವಿಷಯದ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಉತ್ತರಾಖಂಡದ ಆಯುಷ್ ಇಲಾಖೆಗೆ ತಿಳಿಸಿದೆ.
ಸಕ್ಕರೆ ಕಾಯಿಲೆ, ಬೊಜ್ಜು, ಥೈರಾಯ್ಡ್ ಹಾಗೂ ಹೃದ್ರೋಗದ ಔಷಧದ ಕುರಿತು ಪತಂಜಲಿ ಆಯುರ್ವೇದದ ದಾರಿ ತಪ್ಪಿಸುವ ಜಾಹೀರಾತು ಕುರಿತಂತೆ ಆಯುಷ್ ಸಚಿವಾಲಯ ಹಾಗೂ ಉತ್ತರಾಖಂಡ ರಾಜ್ಯ ಪರವಾನಿಗೆ ಪ್ರಾಧಿಕಾರ (ಎಸ್ಎಲ್ಎ) ಒಬ್ಬರ ಮೇಲೊಬ್ಬರು ಗೂಬೆ ಕೂರಿಸಲು ಪ್ರಯತ್ನಿಸುತ್ತಿದೆ.
ಉತ್ತರಾಖಂಡದ ಡೆಹ್ರಾಡೂನ್ನ ಆಯುರ್ವೇದ ಹಾಗೂ ಯುನಾನಿ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಆಯುಷ್ ಸಚಿವಾಲಯ, ದಿವ್ಯ ಫಾರ್ಮಸಿಯಿಂದ ಔಷಧ ಹಾಗೂ ಮಾಂತ್ರಿಕ ಪರಿಹಾರ (ಆಕ್ಷೇಪಾರ್ಹ ಕಾಯ್ದೆ), 1954ರ ನಿರಂತರ ಉಲ್ಲಂಘನೆಗೆ ಸಂಬಂಧಿಸಿ ವಿಷಯವು ಉತ್ತರಾಖಂಡದ ರಾಜ್ಯ ಪರವಾನಿಗೆ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳಿದೆ.
ಆದುದರಿಂದ ಈ ವಿಷಯವನ್ನು ಪರಿಶೀಲಿಸುವಂತೆ, ಸೂಕ್ತ ಕಂಡ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಾಗೂ ಈ ಸಚಿವಾಲಯದ ಸೂಚನೆಯಂತೆ ಮಾಹಿತಿಯನ್ನು ಅರ್ಜಿದಾರರಿಗೆ ತಿಳಿಸುವಂತೆ ಫೆಬ್ರವರಿ 2ರ ಪತ್ರ ವಿನಂತಿಸಿದೆ.