ಮಣಿಪುರದ ಯೋಜನೆಗಳ ಉದ್ಘಾಟನೆ ಸಂದರ್ಭದಲ್ಲೂ ಜನಾಂಗೀಯ ಹಿಂಸೆ ಬಗ್ಗೆ ಮೌನ ತಾಳಿದ ಮೋದಿ
ಹೊಸದಿಲ್ಲಿ : 2024ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಮಾ.9ರಂದು ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಣಿಪುರಕ್ಕಾಗಿ 3,500 ಕೋ.ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ವರ್ಚುವಲ್ ಆಗಿ ಉದ್ಘಾಟಿಸಿದ್ದಾರೆ. ಆದರೆ ಮೇ 2023ರಿಂದ ರಾಜ್ಯದಲ್ಲಿ ಭುಗಿಲೆದ್ದಿರುವ ಜನಾಂಗೀಯ ಘರ್ಷಣೆಗಳ ಕುರಿತು ಅವರು ಚಕಾರವೆತ್ತಿಲ್ಲ.
ಸುದ್ದಿಗಾರರೊಂದಿಗೆ ಮಾತನಾಡಿದ ಮಣಿಪುರ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರು, ಉದ್ಘಾಟನೆಗೊಂಡ ಯೋಜನೆಗಳ ವಿವರಗಳನ್ನು ನೀಡಿದ್ದಾರೆ. ಇವುಗಳಲ್ಲಿ ರಾಜ್ಯದ ಎಲ್ಲ ಮಾನ್ಯತೆ ಪಡೆದಿರುವ ಸಮುದಾಯಗಳಿಗೆ ಪ್ರತ್ಯೇಕ ಮಳಿಗೆಗಳನ್ನು ಹೊಂದಿರುವ ಯೂನಿಟಿ ಮಾಲ್ ಸೇರಿದೆ.
ಮಣಿಪುರದ ರಾಜಧಾನಿ ಇಂಫಾಲದಲ್ಲಿ ವರ್ಚುವಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಹಾಯಕ ವಿದೇಶಾಂಗ ವ್ಯವಹಾರಗಳ ಮತ್ತು ಶಿಕ್ಷಣ ಸಚಿವ ಆರ್.ಕೆ.ರಂಜನ್ ಸಿಂಗ್,ರಾಜ್ಯಸಭಾ ಸದಸ್ಯ ಮಹಾರಾಜಾ ಲೈಶೆಂಬಾ ಸನಜಾವೋಬಾ, ಮುಖ್ಯ ಕಾರ್ಯದರ್ಶಿ ವಿನೀತ ಜೋಶಿ ಮತ್ತಿತರರರು ಉಪಸ್ಥಿತರಿದ್ದರು.
ಮಣಿಪುರದಲ್ಲಿ ಎನ್ ಆರ್ ಸಿ ಯ ತಕ್ಷಣ ಅನುಷ್ಠಾನಕ್ಕಾಗಿ ರಾಜ್ಯ ಸರಕಾರವು ಕೇಂದ್ರಕ್ಕೆ ಶಿಫಾರಸುಗಳನ್ನು ಸಲ್ಲಿಸಿದೆ ಎಂದು ತನ್ನ ಎಕ್ಸ್ ಪೋಸ್ಟ್ ನಲ್ಲಿ ಬರೆದಿರುವ ಸಿಂಗ್,ರಾಜ್ಯದಿಂದ ಭಾರೀ ಸಂಖ್ಯೆಯ ಮ್ಯಾನ್ಮಾರ್ ಪ್ರಜೆಗಳನ್ನು ಗಡಿಪಾರು ಮಾಡಲು ಕಾನೂನು ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಒತ್ತಿ ಹೇಳಿದ್ದಾರೆ.