ಮೋದಿ ಮೌನ ಮಣಿಪುರದ ಕುರಿತು ಅವರ ನಿರ್ಲಜ್ಜ ಅಸಡ್ಡೆಯನ್ನು ತೋರಿಸುತ್ತಿದೆ: ಮಣಿಪುರ ರಾಜ್ಯಪಾಲರಿಗೆ ತಿಳಿಸಿದ ಪ್ರತಿಪಕ್ಷ ನಿಯೋಗ
ಇಂಫಾಲ: ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿರುವ ಪ್ರತಿಪಕ್ಷ ಮೈತ್ರಿಕೂಟ ‘ಇಂಡಿಯಾ’ದ ನಿಯೋಗವು ಪ್ರಧಾನಿ ನರೇಂದ್ರ ಮೋದಿಯವರ ಮೌನವು ಮಣಿಪುರದಲ್ಲಿಯ ಹಿಂಸಾಚಾರಕ್ಕೆ ಅವರ ನಿರ್ಲಜ್ಜ ಅಸಡ್ಡೆಯನ್ನು ತೋರಿಸುತ್ತಿದೆ ಎಂದು ರವಿವಾರ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರಿಗೆ ತಿಳಿಸಿತು.
ನಿಯೋಗದ ಸದಸ್ಯರು ಶನಿವಾರ ಇಂಫಾಲ, ಮೊಯಿರಾಂಗ್ ಮತ್ತು ಚುರಾಚಂದ್ರಪುರದಲ್ಲಿಯ ಪರಿಹಾರ ಶಿಬಿರಗಳಿಗೆ ತೆರಳಿ ಹಿಂಸಾಚಾರ ಸಂತ್ರಸ್ತರನ್ನು ಭೇಟಿಯಾಗಿದ್ದರು.
ರವಿವಾರ ಬೆಳಿಗ್ಗೆ ಉಕಿಯೆ ಅವರನ್ನು ಭೇಟಿಯಾದ ಸಂಸದರು ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದಿರುವ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಕೇಂದ್ರಕ್ಕೆ ತಿಳಿಸುವಂತೆ ಹಾಗೂ ಶಾಂತಿ ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸುವಂತೆ ಕೇಳಿಕೊಳ್ಳುವಂತೆ ಸೂಚಿಸಿದರು.
ಮಣಿಪುರ ಹಿಂಸಾಚಾರದಲ್ಲಿ 160ಕ್ಕೂ ಹೆಚ್ಚಿನ ಜನರು ಮೃತಪಟ್ಟಿದ್ದಾರೆ, ನೂರಾರು ಜನರು ಗಾಯಗೊಂಡಿದ್ದಾರೆ, 5,000ಕ್ಕೂ ಅಧಿಕ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು 60,000ಕ್ಕೂ ಜನರು ಸ್ಥಳಾಂತರಗೊಂಡಿದ್ದಾರೆ. ಈ ಅಂಕಿಸಂಖ್ಯೆಗಳಿಂದ ಉಭಯ ಸಮುದಾಯಗಳ ಜನರ ಜೀವಗಳನ್ನು ಮತ್ತು ಆಸ್ತಿಗಳನ್ನು ರಕ್ಷಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲಗೊಂಡಿವೆ ಎನ್ನುವುದು ಸ್ಪಷ್ಟವಾಗಿದೆ ಎಂದು ನಿಯೋಗವು ರಾಜ್ಯಪಾಲರಿಗೆ ಸಲ್ಲಿಸಿರುವ ಅಹವಾಲಿನಲ್ಲಿ ಹೇಳಿದೆ.
ಕಳೆದ ಕೆಲವು ದಿನಗಳಿಂದ ನಿರಂತರ ಗುಂಡು ಹಾರಾಟ ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ ವರದಿಗಳು ಕಳೆದ ಮೂರು ತಿಂಗಳುಗಳಿಂದಲೂ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸರಕಾರಗಳು ಸಂಪೂರ್ಣವಾಗಿ ವಿಫಲಗೊಂಡಿವೆ ಎನ್ನುವುದನ್ನು ಸಾಬೀತುಗೊಳಿಸಿವೆ ಎಂದೂ ಅಹವಾಲಿನಲ್ಲಿ ಹೇಳಲಾಗಿದೆ.
ಪರಿಹಾರ ಶಿಬಿರಗಳಲ್ಲಿನ ಸ್ಥಿತಿ ದಯನೀಯವಾಗಿದೆ. ಆದ್ಯತೆಯ ಆಧಾರದಲ್ಲಿ ಮಕ್ಕಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ ಮತ್ತು ಇದು ರಾಜ್ಯ ಮತ್ತು ಕೇಂದ್ರ ಸರಕಾರಗಳ ಆದ್ಯತೆಯಾಗಬೇಕಿದೆ ಎಂದಿರುವ ನಿಯೋಗವು,ಕಳೆದ ಮೂರು ತಿಂಗಳುಗಳಿಂದಲೂ ಮಣಿಪುರದಲ್ಲಿ ಇಂಟರ್ನೆಟ್ನನ ನಿರಂತರ ನಿಷೇಧವನ್ನೂ ಪ್ರಸ್ತಾವಿಸಿದೆ. ಇದು ಅಲ್ಲಸಲ್ಲದ ವದಂತಿಗಳು ಮತ್ತು ಹಾಲಿ ಇರುವ ಅಪನಂಬಿಕೆಗಳನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂದು ಹೇಳಿದೆ.
ಮಂಗಳವಾರ ರಾಜ್ಯದ ಬಿಜೆಪಿ ಸರಕಾರವು ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಷರತ್ತುಬದ್ಧವಾಗಿ ಹಿಂದೆಗೆದುಕೊಂಡಿದೆಯಾದರೂ,ಮೊಬೈಲ್ ಇಂಟರ್ನೆಟ್ ನಿಷೇಧ ಈಗಲೂ ಮುಂದುವರಿದಿದೆ.
ಭದ್ರತಾ ಸಮಸ್ಯೆಗಳಿಗೆ ಕಾರಣವಾಗಬಹುದು ಮೂರು ತಿಂಗಳಿನಿಂದಲೂ ನಡೆಯುತ್ತಿರುವ ಜನಾಂಗೀಯ ಸಂಘರ್ಷವನ್ನು ಶೀಘ್ರ ಬಗೆಹರಿಸದಿದ್ದರೆ ಅದು ದೇಶದ ಭದ್ರತಾ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದೂ ನಿಯೋಗವು ಕಳವಳ ವ್ಯಕ್ತಪಡಿಸಿದೆ.
ರಾಜ್ಯಪಾಲರ ಭೇಟಿಯ ಬಳಿಕ ರಾಜಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ ರಂಜನ್ ಚೌಧುರಿ ಅವರು,‘ರಾಜ್ಯಪಾಲರು ನಮ್ಮ ಅಭಿಪ್ರಾಯಗಳನ್ನು ಆಲಿಸಿದರು ಮತ್ತು ಸಹಮತ ವ್ಯಕ್ತಪಡಿಸಿದರು. ಹಿಂಸಾಚಾರದ ಕುರಿತು ನೋವು ವ್ಯಕ್ತಪಡಿಸಿದ ಅವರು ಜನರ ಸಂಕಷ್ಟಗಳನ್ನು ವಿವರಿಸಿದರು. ಸಮುದಾಯಗಳ ನಡುವಿನ ಅಪನಂಬಿಕೆಯನ್ನು ಹೋಗಲಾಡಿಸಲು ಮೈತೈ ಮತ್ತು ಕುಕಿ ಜನರೊಂದಿಗೆ ಮಾತನಾಡಲು ಸರ್ವಪಕ್ಷ ನಿಯೋಗವೊಂದು ಮಣಿಪುರಕ್ಕೆ ಭೇಟಿ ನೀಡುವುದು ಅಗತ್ಯವಾಗಿದೆ ಎಂದು ಅವರು ಸಲಹೆ ನೀಡಿದರು. ನಾವು ಅದನ್ನು ಒಪ್ಪಿಕೊಳ್ಳುತ್ತೇವೆ ’ ಎಂದು ತಿಳಿಸಿದರು.
ಸಂಸದರು ಮಣಿಪುರ ಕುರಿತು ತಮ್ಮ ಅವಲೋಕನಗಳನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ ಮತ್ತು ಅವಕಾಶ ಸಿಕ್ಕಿದಾಗ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಲಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಣಿಪುರದಲ್ಲಿ ಎಸಗಿರುವ ಲೋಪಗಳ ಬಗ್ಗೆ ನಾವು ಸಂಸತ್ತಿನಲ್ಲಿ ಮಾತನಾಡುತ್ತೇವೆ ಮತ್ತು ವಿಷಯದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಕೇಂದ್ರವನ್ನು ಕೋರಿಕೊಳ್ಳುತ್ತೇವೆ ’ ಎಂದರು. ಮಣಿಪುರದಲ್ಲಿ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ ಎಂದು ಚೌಧುರಿ ಪ್ರತಿಪಾದಿಸಿದರು.
ಎರಡು ದಿನಗಳ ಭೇಟಿಯಲ್ಲಿ ತಮ್ಮ ಅನುಭವವನ್ನು ಬಿಚ್ಚಿಟ್ಟ ಅವರು,‘ಕಣಿವೆಯಲ್ಲಿನ ಜನರು (ಮೈತೈಗಳು) ಕುಕಿಗಳು ವಾಸವಿರುವ ಬೆಟ್ಟಗಳ ಕಡೆಗೆ ಮತ್ತು ಕುಕಿಗಳು ಕಣಿವೆಯತ್ತ ತೆರಳಲು ಸಾಧ್ಯವಾಗದ ಸ್ಥಿತಿ ಸೃಷ್ಟಿಯಾಗಿದೆ. ಪಡಿತರ,ಮೇವು, ಹಾಲು,ಶಿಶು ಆಹಾರ ಮತ್ತು ಎಲ್ಲ ಇತರ ಅಗತ್ಯ ವಸ್ತುಗಳ ತೀವ್ರ ಕೊರತೆಯಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕುಂಟಾಗಿದೆ. ಇವೆಲ್ಲವನ್ನೂ ನಾವು ರಾಜ್ಯಪಾಲರಿಗೆ ವಿವರಿಸಿದ್ದು,ಈ ಸಮಸ್ಯೆಗಳನ್ನು ಸಾಮೂಹಿಕವಾಗಿ ಪರಿಹರಿಸುವ ಅಗತ್ಯವಿದೆ ಎಂದು ಅವರು ಹೇಳಿದರು ’ ಎಂದು ತಿಳಿಸಿದರು.
ನಿಯೋಗವು ರವಿವಾರ ಮಧ್ಯಾಹ್ನ ದಿಲ್ಲಿಗೆ ಮರಳಿತು.