ಅಕ್ರಮ ಹಣ ವರ್ಗಾವಣೆ ಪ್ರಕರಣ: ಆಪ್ ಸಂಸದ ಸಂಜಯ್ ಸಿಂಗ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

Update: 2023-12-02 15:12 GMT

ಸಂಜಯ ಸಿಂಗ್ | Photo: PTI 

ಹೊಸದಿಲ್ಲಿ: ಜಾರಿ ನಿರ್ದೇಶನಾಲಯ (ಈ.ಡಿ.)ವು ಶನಿವಾರ ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಪ್ ಸಂಸದ ಸಂಜಯ ಸಿಂಗ್ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆಯ ವಿವಿಧ ಕಲಮ್ಗಳಡಿ ಪೂರಕ ದೋಷಾರೋಪ ಪಟ್ಟಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಪ್ರಾಸಿಕ್ಯೂಷನ್ ಈ ಹಿಂದೆ ಇಂತಹ ಸುಮಾರು ಐದು ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿತ್ತು.

ಈ.ಡಿ.ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ನಲ್ಲಿ ಆಪ್ ನ ರಾಜ್ಯಸಭಾ ಸದಸ್ಯರಾಗಿರುವ ಸಿಂಗ್ ಅವರನ್ನು ಬಂಧಿಸಿತ್ತು. ಪ್ರಕರಣದಲ್ಲಿ ಆರೋಪಿಯಾಗಿರುವ ಉದ್ಯಮಿ ದಿನೇಶ್ ಅರೋರಾ ಆಗಸ್ಟ್ 2021 ಮತ್ತು ಎಪ್ರಿಲ್ 2022ರ ನಡುವೆ ತಲಾ ಒಂದು ಕೋಟಿ ರೂ.ಗಳ ಎರಡು ಕಂತುಗಳಲ್ಲಿ ಎರಡು ಕೋಟಿ ರೂ.ಗಳನ್ನು ಸಿಂಗ್ ಅವರಿಗೆ ಪಾವತಿಸಿದ್ದರು ಎಂದು ಈ.ಡಿ. ಆರೋಪಿಸಿದೆ. ಸಿಂಗ್ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

2021-22ರ ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಈ.ಡಿ.ಸಿಂಗ್ ಅವರನ್ನು ಬಂಧಿಸಿದೆ. ಸಿಂಗ್ ಅವರು ಮಾಜಿ ಉಪ ಮುಖ್ಯಮಂತ್ರಿ ಮನೀಷ ಸಿಸೋಡಿಯಾರ ಬಳಿಕ ಬಂಧಿತ ಎರಡನೇ ಹಿರಿಯ ನಾಯಕರಾಗಿದ್ದಾರೆ.

ಆಪ್ ಈ ಬಂಧನಗಳನ್ನು ಮತ್ತು ಪ್ರಕರಣವನ್ನು ‘ರಾಜಕೀಯ ಪ್ರತೀಕಾರದ ಕ್ರಮ’ ಎಂದು ಬಣ್ಣಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News