ಮೊರದಾಬಾದ್ | ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ ;ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ
ಮೊರದಾಬಾದ್: ಮಹಿಳೆಯ ಕುತ್ತಿಗೆಯನ್ನು ಸೀಳಿ ಆಕೆಯನ್ನು ಬರ್ಬರವಾಗಿ ಹತ್ಯೆಗೈದ ಆರೋಪದಲ್ಲಿ ಇಬ್ಬರು ಯುವಕರನ್ನು ಉತ್ತರಪ್ರದೇಶ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಆರೋಪಿಗಳನ್ನು ಮೋಹಿತ್ ಸೈನಿ ಹಾಗೂ ಓಂಕಾರ್ ಶರ್ಮಾ ಎಂದು ಗುರುತಿಸಲಾಗಿದ್ದು, ಅವರು ಡಿಸೆಂಬರ್ 25ರಿಂದ ತಲೆಮರೆಸಿಕೊಂಡಿದ್ದರು. ಕೊಲೆಯಾದ ಮಹಿಳೆ ಅಂಜಲಿಯ ಮೃತದೇಹವು ಮೊರದಾಬಾದ್ ಸಮೀಪದ ಅರಣ್ಯ ಪ್ರದೇಶವೊಂದರಲ್ಲಿ ಪತ್ತೆಯಾಗಿತ್ತು.
ಆರೋಪಿಯನ್ನು ಮೋಹಿತ್ ಎಂದು ಗುರುತಿಸಲಾಗಿದ್ದು, ಫುಟ್ಬಾಲ್ ಆಟಗಾರನಾದ ಆತ ಪ್ರಥಮ ಬಿಕಾಂ ವಿದ್ಯಾರ್ಥಿ. ಅಂಜಲಿ ಜೊತೆ ಕಳೆದ ಎರಡು ವರ್ಷಗಳಿಂದ ಲಿವ್ ಇನ್ ರಿಲೇಶನ್‌ನಲ್ಲಿದ್ದ ಎನ್ನಲಾಗಿದೆ. ಆದರೆ ಆಕೆ ತನ್ನನ್ನು ವಂಚಿಸುತ್ತಿದ್ದಾಳೆಂದು ತಿಳಿದ ಬಳಿಕ ಮೋಹಿತ್, ಅವಳನ್ನು ಕೊಲೆಗೈಯಲು ಸಂಚು ಹೂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಜಲಿಯನ್ನು ಕೊಲೆಗೈದ ಬಳಿಕ ಆತ ಮೃತದೇಹವನ್ನು ಅರಣ್ಯ ಪ್ರದೇಶದಲ್ಲಿ ಎಸೆದುಹೋಗಿದ್ದ ಮತ್ತು ಈ ಅಪರಾಧ ಕೃತ್ಯದಲ್ಲಿ ತನಗೆ ನೆರವು ನೀಡಿದ ಸ್ನೇಹಿತನೊಂದಿಗೆ ಪರಾರಿಯಾಗಿದ್ದನೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನಪ್ರಿಯ ವೆಬ್‌ಸಿರೀಸ್ ಮಿರ್ಝಾಪುರ್‌ನಿಂದ ಪ್ರೇರಿತನಾಗಿ ಈ ಕೃತ್ಯವೆಸಗಿದ್ದಾಗಿ ಆತ ಹೇಳಿದ್ದಾನೆ.
ಅಂಜಲಿಯು ಮೋಹಿತ್ ಸೈನಿಗೆ ಸೇರಿದ ಬಾಡಿಗೆ ಮನೆಯಲ್ಲಿ ಪತಿಯೊಂದಿಗೆ ವಾಸಿಸುತ್ತಿದ್ದಳು. ಅಂಜಲಿಯ ಪತಿಯು ದಿಲ್ಲಿಯ ಹೊಟೇಲ್ ಒಂದರಲ್ಲಿ ಉದ್ಯೋಗದಲ್ಲಿದ್ದು ಹಲವು ತಿಂಗಳುಗಳಿಂದ ಮನೆಗೆ ಬರುತ್ತಿರಲಿಲ್ಲ. ಈ ಸಂದರ್ಭದಲ್ಲಿ ಆರೋಪಿ ಮೋಹಿತ್ ಹಾಗೂ ಅಂಜಲಿ ನಡುವೆ ಸಂಬಂಧ ಬೆಳೆದಿತ್ತು. ಆದರೆ ಇತ್ತೀಚೆಗೆ ಅಂಜಲಿ ಪತಿಯೊಂದಿಗೆ ಮಾತನಾಡಲಾರಂಭಿಸಿದ್ದುದು ಹೇಮಂತ್‌ನ ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.