ಗುಜರಾತ್ | ಕಸ ಸಾಗಣೆ ವಾಹನದಲ್ಲಿ ಆಸ್ಪತ್ರೆಗೆ ಮೃತದೇಹ ರವಾನೆ; ವೀಡಿಯೊ ವೈರಲ್

Update: 2025-01-01 11:05 IST
ಗುಜರಾತ್ | ಕಸ ಸಾಗಣೆ ವಾಹನದಲ್ಲಿ ಆಸ್ಪತ್ರೆಗೆ ಮೃತದೇಹ ರವಾನೆ; ವೀಡಿಯೊ ವೈರಲ್

Screengrab: X/@SevadalGN

  • whatsapp icon

ಮೆಹ್ಸಾನಾ: ಗುಜರಾತ್ ನ ಮೆಹ್ಸಾನಾ ಜಿಲ್ಲೆಯ ಕಡಿ ಪುರಸಭೆಯ ಕಸ ಸಂಗ್ರಹ ವಾಹನದಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಕಡಿ ಪುರಸಭೆಯಲ್ಲಿ ಶವಸಾಗಿಸಲು ಯಾವುದೇ ವಾಹನ ಇಲ್ಲದಿರುವುದರಿಂದ ಅಧಿಕಾರಿಗಳು ಶವವನ್ನು ಸಾಗಿಸಲು ಕಸದ ವಾಹನ ಕಳುಹಿಸುಹಿಸಿದ್ದರು ಎಂದು ತಿಳಿದು ಬಂದಿದೆ.

ಡಿಸೆಂಬರ್ 29 ರಂದು ಈ ಘಟನೆ ನಡೆದಿದೆ. ಕಡಿ ನಗರ ವ್ಯಾಪ್ತಿಯ ಹೊರಗಿನ ಕಾಲುವೆಯೊಂದರಲಿ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಯಾವ ವಾಹನಗಳೂ ಅದನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸಿದ್ಧರಿರಲಿಲ್ಲ ಎನ್ನಲಾಗಿದೆ. ಕೊನೆಗೆ ಅಧಿಕಾರಿಗಳು ಕಸ ಸಂಗ್ರಹಣೆ ವಾಹನ ಬಳಸಲು ನಿರ್ಧರಿಸಿದ್ದಾರೆ.

ರಾತ್ರಿಯ ವೇಳೆ ನಡೆದ ಈ ಘಟನೆಯನ್ನು ಬೇರೊಂದು ವಾಹನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಚಿತ್ರೀಕರಿಸಿದ್ದಾರೆ. ಕಡಿ ಪುರಸಭೆಯ ಕಸ ಸಂಗ್ರಹ ವ್ಯಾನ್ ನರ್ಮದಾ ಕಾಲುವೆ ಬಳಿಯ ಸ್ಥಳದಿಂದ ಕಡಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೃತದೇಹವನ್ನು ಸಾಗಿಸುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಡಿ ಪುರಸಭೆಯ ಮುಖ್ಯ ಅಧಿಕಾರಿ ಸಂದೀಪ್ ಪಟೇಲ್ , ಘಟನೆಯು ನಾಗರಿಕ ಮಂಡಳಿಯ ಮಿತಿಯ ಹೊರಗೆ ರವಿವಾರ ರಾತ್ರಿ ನಡೆದಿದೆ ಎಂದು ಹೇಳಿದ್ದಾರೆ.

"ಡಿಸೆಂಬರ್ 29 ರಂದು ನಮ್ಮ ನಾಗರಿಕ ಸಂಸ್ಥೆಯ ವ್ಯಾಪ್ತಿಯಿಂದ ಹೊರಗಿರುವ ಹಳ್ಳಿಯಿಂದ ಹಾದು ಹೋಗುತ್ತಿದ್ದ ನರ್ಮದಾ ಕಾಲುವೆಯಿಂದ ಕೊಳೆತ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆಗೆದೊಯ್ಯಲು ಶವಾಗಾರದ ವ್ಯಾನ್ ಕಳುಹಿಸಲು ಪೊಲೀಸ್ ಅಧಿಕಾರಿಗಳು ಕೇಳಿದಾಗ, ವ್ಯಾನ್ ಹಳೆಯದಾದ್ದರಿಂದ ಆರ್ಟಿಒ ನಿಯಮಗಳಂತೆ ಅದನ್ನು ಇತ್ತೀಚೆಗೆ ಸ್ಕ್ರ್ಯಾಪ್ ಮಾಡಲಾಗಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ”ಎಂದು ಅವರು ಹೇಳಿದರು.

“ಮೃತದೇಹ ಕೊಳೆತು ಹೋಗಿದ್ದರಿಂದ ಬೇರೆ ವಾಹನ ಮಾಲೀಕರು ತೆಗೆದೊಯ್ಯಲು ನಿರಾಕರಿಸಿದ್ದಾರೆ. ಹೀಗಾಗಿ ಬೇರೆ ವಾಹನದ ವ್ಯವಸ್ಥೆ ಮಾಡುವಂತೆ ಪೊಲೀಸರು ಪದೇ ಪದೇ ಮನವಿ ಮಾಡಿದ ನಂತರ ನಮ್ಮ ಕೆಳಹಂತದ ಸಿಬ್ಬಂದಿ ಹಿರಿಯ ಅಧಿಕಾರಿಗಳನ್ನು ಕೇಳದೆ ಕಸದ ವ್ಯಾನ್ ಕಳುಹಿಸಿದ್ದಾರೆ. ಕಸದ ವ್ಯಾನ್ ಸಂಪೂರ್ಣವಾಗಿ ಖಾಲಿಯಾಗಿತ್ತು ಮತ್ತು ಅದರಲ್ಲಿ ಯಾವುದೇ ಕಸ ಇರಲಿಲ್ಲ,” ಎಂದು ಸಂದೀಪ್ ಪಟೇಲ್ ಹೇಳಿದರು.

ಘಟನೆಯ ನಂತರ ಎಚ್ಚೆತ್ತುಕೊಂಡಿರುವ ಪುರಸಭೆಯು ಶವಸಾಗಣೆಗೆ ಹೊಸ ವಾಹನ ಖರೀದಿಸಲು ಪ್ರಕ್ರಿಯೆ ಆರಂಭಿಸಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News