ಮ.ಪ್ರ. ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆಯೆಂದ ಪ್ರಿಯಾಂಕಾ ಗಾಂಧಿ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಿಜೆಪಿ
ಭೋಪಾಲ್: ಮಧ್ಯಪ್ರದೇಶ ಸರಕಾರವು ಭ್ರಷ್ಟಾಚಾರದಲ್ಲಿ ತೊಡಗಿದೆಯೆಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಕ್ಕಾಗಿ ಅವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ಬಿಜೆಪಿ ನಾಯಕರು ಶನಿವಾರ ಎಚ್ಚರಿಕೆ ನೀಡಿದ್ದಾರೆ.
ಪ್ರಿಯಾಂಕಾ ಅವರ ಆರೋಪವು ಅಪ್ಪಟ ಸುಳ್ಳೆಂದು ಮಧ್ಯಪ್ರದೇಶದ ಗೃಹಸಚಿವ ನರೋತ್ತಮ ಬಣ್ಣಿಸಿದಾರೆ. ಒಂದು ವೇಳೆ ಆರೋಪಗಳನ್ನು ಸಾಬೀತುಪಡಿಸಲು ಕಾಂಗ್ರೆಸ್ ನಾಯಕಿಯು ವಿಫಲವಾದಲ್ಲಿ ರಾಜ್ಯ ಸರಕಾರ ಹಾಗೂ ಬಿಜೆಪಿಯು ಅವರ ವಿರುದ್ಧ ಕಾನೂನುಕ್ರಮಕ್ಕೆ ಮುಂದಾಗಲಿವೆ ಎಂದವರು ಎಚ್ಚರಿಕೆ ನೀಡಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಧ್ಯಪ್ರದೇಶ ಸರಕಾರದ ವಿರುದ್ಧ ಆರೋಪವನ್ನು ಮಾಡಲು ನಕಲಿ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆಂದು ರಾಜ್ಯ ಬಿಜೆಪಿ ವರಿಷ್ಠ ವಿ.ಡಿ.ಶರ್ಮಾ ಆರೋಪಿಸಿದ್ದಾರೆ ಹಾಗೂ ಆಕೆಯ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಭ್ರಷ್ಟಾಚಾರದಲ್ಲಿ ತೊಡಗಿದೆ ಮತ್ತು ರಾಜಕೀಯ ಭಯೋತ್ಪಾದನೆಯನ್ನು ಸೃಷ್ಟಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷ ಹೇಳಿದೆ.
ಶೇ.50ರಷ್ಟು ಕಮಿಷನ್ ಪಾವತಿಸಿದ ಬಳಿಕವೇ ತಮಗೆ ತಮಗೆ ಗುತ್ತಿಗೆ ಕಾಮಗಾರಿಗಳ ಹಣವನ್ನು ಪಾವತಿಸಲಾಗುತ್ತದೆ ಎಂದು ಆರೋಪಿಸಿ ಮಧ್ಯಪ್ರದೇಶದ ಗುತ್ತಿಗೆದಾರರ ಒಕ್ಕೂಟವು ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಿಗೆ ಪತ್ರವನ್ನು ಬರೆದಿದ್ದಾರೆಂದು ಪ್ರಿಯಾಂಕಾ ಗಾಂಧಿ ಅವರು ಶುಕ್ರವಾರ ‘ ಎಕ್ಸ್’ (ಹಿಂದಿನ ಟ್ವಿಟರ್)ನಲ್ಲಿ ಪ್ರಕಟಿಸಿದ್ದಾರೆ.
‘‘ಕರ್ನಾಟಕದ ಹಿಂದಿನ ಭ್ರಷ್ಟ ಬಿಜೆಪಿ ಸರಕಾರವು ಶೇ.40ರಷ್ಟು ಕಮೀಶನ್ ಸಂಗ್ರಹಿಸುತ್ತಿತ್ತು. ಅದನ್ನೂ ಮೀರಿಸುವಂತೆ ಬಿಜೆಪಿಯು ಮಧ್ಯಪ್ರದೇಶದಲ್ಲಿ ತನ್ನದೇ ದಾಖಲೆಯನ್ನು ಮುರಿದಿದೆ. ಕರ್ನಾಟಕದ ಜನತೆ 40 ಪರ್ಸೆಂಟ್ ಕಮಿಷನ್ ಸರಕಾರವನ್ನು ಹೊರದಬ್ಬಿದೆ. ಇದೀಗ ಮಧ್ಯಪ್ರದೇಶದ ಜನತೆ 50 ಪಸೆಂಟ್ ಕಮಿಷನ್ ಸರಕಾರವನ್ನು ಕಿತ್ತೊಗೆಯಲಿದೆ’’ ಎಂದು ಪ್ರಿಯಾಂಕಾ ಪೋಸ್ಟ್ ಮಾಡಿದ್ದರು.
ಪ್ರಿಯಾಂಕಾ ಅವರ ಆರೋಪವನ್ನು ಅಲ್ಲಗಳೆದಿರು ಮಧ್ಯಪ್ರದೇಶದ ಬಿಜೆಪಿ ವರಿಷ್ಠ ಮಿಶ್ರಾ ಅವರು, ಸರಕಾರವನ್ನು ಟೀಕಿಸಲು ಯಾವುದೇ ವಿಷಯಗಳಿಲ್ಲದೆ ಹತಾಶವಾಗಿರುವ ಕಾಂಗ್ರೆಸ್ ಪಕ್ಷವು ರಾಜಕೀಯ ನಾಟಕವಾಡುತ್ತಿದೆ ಎಂದು ಮಿಶ್ರಾ ಹೇಳಿದ್ದಾರೆ.
“ರಾಜ್ಯ ಕಾಂಗ್ರೆಸ್ ನಾಯಕರು ಮೊದಲಿಗೆ ರಾಹುಲ್ ಗಾಂಧಿ ಸುಳ್ಳು ಹೇಳುವಂತೆ ಮಾಡಿದರು ಹಾಗೂ ಆನಂತರ ಪ್ರಿಯಾಂಕಾ ಗಾಂಧಿ ಅವರು ಹುಸಿ ಟ್ವೀಟ್ ಮಾಡಿದ್ದಾರೆ. ಪ್ರಿಯಾಂಕಾಜೀ ಅವರೇ ನಿಮ್ಮ ಟ್ವೀಟ್ಗಳಿಗೆ ಆಧಾರವನ್ನು ನೀಡಿ. ಇಲ್ಲದೇ ಇದ್ದಲ್ಲಿ ಕ್ರಮ ಕೈಗೊಳ್ಳಲು ನಮ್ಮ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ’’ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.