ಸ್ಪೀಕರ್ ಭೇಟಿಯಾಗಿ ವಿವರಣೆ ನೀಡಿದ ಸಂಸದ ಪ್ರತಾಪ್ ಸಿಂಹ

Update: 2023-12-14 16:11 GMT

 ಪ್ರತಾಪ್ ಸಿಂಹ | Photo: PTI 

ಹೊಸದಿಲ್ಲಿ: ಲೋಕಸಭೆಯಲ್ಲಿ ಹೊಗೆಬಾಂಬ್ ಸಿಡಿಸಿದ ಇಬ್ಬರು ಆರೋಪಿಗಳಿಗೆ ಸಂಸತ್‌ ಭವನ ಪ್ರವೇಶಿಸಲು ಪಾಸ್ ಒದಗಿಸಿದ್ದಕ್ಕಾಗಿ ವಿವಾದಕ್ಕೆ ಗುರಿಯಾಗಿರುವ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರು ಗುರುವಾರ ಲೋಕಸಭಾ ಸ್ಪೀಕರ್ ಓಂಬಿರ್ಲಾ ಅವರನ್ನು ಭೇಟಿಯಾಗಿ ವಿವರಣೆಯನ್ನು ನೀಡಿದ್ದಾರೆಂದು ಮೂಲಗಳು ತಿಳಿಸಿವೆ. ಆರೋಪಿಗಳಲ್ಲೊಬ್ಬನಾದ ಡಿ. ಮನೋರಂಜನ್ ತಂದೆ ತನ್ನ ಪುತ್ರನಿಗೆ ಲೋಕಸಭೆಯ ಸಂದರ್ಶಕರ ಪಾಸ್‌ ಗಾಗಿ ತನ್ನನ್ನು ಭೇಟಿಯಾಗಿದ್ದರು ಎಂದು ಅವರು ಲೋಕಸಭಾ ಸ್ಪೀಕರ್ ಅವರಿಗೆ ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.

ನೂತನ ಸಂಸತ್‌ ಭವನ ಕಟ್ಟಡವನ್ನು ಸಂದರ್ಶಿಸಲು ತನ್ನ ಪುತ್ರ ಬಯಸಿದ್ದು, ಆತನಿಗೆ ಪಾಸ್ ಒದಗಿಸಿಕೊಡುವಂತೆ ಆತನ ತಂದೆ ತನ್ನನ್ನು ಹಲವಾರು ಸಲ ಕೋರಿದ್ದರೆಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ. ಇನ್ನೋರ್ವ ಆರೋಪಿ ಸಾಗರ್ ಶರ್ಮಾ ಲೋಕಸಭೆಯ ಸಂದರ್ಶಕರ ಪಾಸ್‌ ಗಾಗಿ ಪ್ರತಾಪ್ ಸಿಂಹ ಅವರ ಖಾಸಗಿ ಸಹಾಯಕ ಹಾಗೂ ಕಚೇರಿಯ ಜೊತೆ ನಿರಂತರ ಸಂಪರ್ಕದಲ್ಲಿದ್ದನೆಂದು ಅವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ತಾನು ಈಗಾಗಲೇ ತಿಳಿಸಿರುವುದಕ್ಕಿಂತ ಹೆಚ್ಚಿನ ಮಾಹಿತಿಯನ್ನು ತನ್ನ ಬಳಿ ಇಲ್ಲವೆಂದು ಲೋಕಸಭಾ ಸ್ಪೀಕರ್ ಓಂಬಿರ್ಲಾ ಅವರಿಗೆ ಪ್ರತಾಪ್ ಸಿಂಹ ಮನದಟ್ಟು ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News