ಮಾಲೆಗಾಂವ್ ಸ್ಪೋಟ ಪ್ರಕರಣ: ಪ್ರಜ್ಞಾ ಠಾಕೂರ್ ಗೆ ಮತ್ತೆ ವಾರೆಂಟ್ ಜಾರಿಗೊಳಿಸಿದ ಮುಂಬೈ ನ್ಯಾಯಾಲಯ
ಮುಂಬೈ: 2008ರಲ್ಲಿ ನಡೆದಿದ್ದ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿನ ಆರೋಪಿಗಳ ಪೈಕಿ ಒಬ್ಬರಾಗಿರುವ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಇತ್ತೀಚಿನ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಅವರಿಗೆ ಮುಂಬೈನ ವಿಶೇಷ ನ್ಯಾಯಾಲಯವು ಹೊಸದಾಗಿ ಜಾಮೀನು ಸಹಿತ ವಾರೆಂಟ್ ಜಾರಿಗೊಳಿಸಿದೆ ಎಂದು barandbench.com ವರದಿ ಮಾಡಿದೆ.
ನ್ಯಾಯಾಲಯದ ಸೂಚನೆಯಂತೆ ಪ್ರಜ್ಞಾ ಠಾಕೂರ್ ವಿಚಾರಣೆಗೆ ಹಾಜರಾಗದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಈ ತಿಂಗಳ ಆರಂಭದಲ್ಲೂ ಕೂಡಾ ನ್ಯಾಯಾಲಯವು ಅವರಿಗೆ ಜಾಮೀನುಸಹಿತ ವಾರೆಂಟ್ ಹೊರಡಿಸಿತ್ತಾದರೂ, ದಾಖಲೆಯಲ್ಲಿರುವ ವಿಳಾಸವು ಹಳತಾಗಿದ್ದುದರಿಂದ, ಆ ವಾರೆಂಟ್ ಅನ್ನು ವಿತರಿಸಲು ಸಾಧ್ಯವಾಗಿರಲಿಲ್ಲ.
ಹೀಗಾಗಿ, ಪ್ರಜ್ಞಾ ಠಾಕೂರ್ ವಕೀಲರ ತಂಡ ಒದಗಿಸಿರುವ ನೂತನ ವಿಳಾಸವನ್ನು ಆಧರಿಸಿ ನ್ಯಾಯಾಧೀಶರು ಹೊಸದಾಗಿ ವಾರೆಂಟ್ ಜಾರಿಗೊಳಿಸಿದ್ದಾರೆ.
“ಪ್ರಥಮ ಆರೋಪಿ ಪ್ರಜ್ಞಾ ಠಾಕೂರ್ ಪರ ವಕೀಲರು ಒದಗಿಸಿರುವ ಹೊಸ ವಿಳಾಸವನ್ನು ಆಧರಿಸಿ, ಅವರಿಗೆ ರೂ. 10,000 ಮೊತ್ತದ ಜಾಮೀನುಸಹಿತ ವಾರೆಂಟ್ ಅನ್ನು ಜಾರಿಗೊಳಿಸಲಾಗಿದೆ” ಎಂದು ನ್ಯಾ. ಲಹೋಟಿ ಆದೇಶಿಸಿದ್ದಾರೆ.
ವಿಚಾರಣೆಗೆ ಗೈರಾದ ಕಾರಣಕ್ಕೆ ಪ್ರಜ್ಞಾ ಠಾಕೂರ್ ಗೆ ನ್ಯಾಯಾಲಯವು ಜಾಮೀನು ಸಹಿತ ವಾರೆಂಟ್ ಹೊರಡಿಸುತ್ತಿರುವುದು ಈ ವರ್ಷದಲ್ಲಿ ಇದು ಎರಡನೆ ಬಾರಿಯಾಗಿದೆ. ಮಾರ್ಚ್ 2024ರಲ್ಲೂ ಕೂಡಾ ಇಂತಹುದೇ ವಾರೆಂಟ್ ಅನ್ನು ಜಾರಿಗೊಳಿಸಲಾಗಿತ್ತಾದರೂ, ಪ್ರಜ್ಞಾ ಠಾಕೂರ್ ವಿಚಾರಣೆಗೆ ಹಾಜರಾಗಿದ್ದರಿಂದ, ಆ ವಾರೆಂಟ್ ಗೆ ತಡೆ ನೀಡಲಾಗಿತ್ತು.