ವಾಯು ಗುಣಮಟ್ಟ ಕುಸಿತವು ‘ಜನರ ಆರೋಗ್ಯದ ಹತ್ಯೆ’: ದಿಲ್ಲಿ ವಾಯುಮಾಲಿನ್ಯ ಕುರಿತು ಸುಪ್ರೀಂ ಕಳವಳ
ಹೊಸದಿಲ್ಲಿ: ರಾಜಧಾನಿ ದಿಲ್ಲಿಯ ಕುಸಿಯುತ್ತಿರುವ ವಾಯು ಗುಣಮಟ್ಟದ ಬಗ್ಗೆ ತನ್ನ ತೀವ್ರ ಕಳವಳವನ್ನು ಇಂದು ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ದಿಲ್ಲಿಯ ವಾಯು ಮಾಲಿನ್ಯವು ರಾಜಕೀಯ ಯುದ್ಧವಾಗಲು ಸಾಧ್ಯವಿಲ್ಲ, ಈ ವಾಯು ಗುಣಮಟ್ಟದ ಕುಸಿತವು “ಜನರ ಆರೋಗ್ಯದ ಹತ್ಯೆ” ಎಂದು ಹೇಳಿದೆ.
ನೆರೆಯ ಪಂಜಾಬ್ ಮತ್ತು ಹರ್ಯಾಣಾದಲ್ಲಿ ಕೃಷಿ ತ್ಯಾಜ್ಯವನ್ನು ಸುಡುವುದೇ ಪ್ರತಿ ಚಳಿಗಾಲದಲ್ಲಿ ದಿಲ್ಲಿಯ ವಾಯು ಮಾಲಿನ್ಯಕ್ಕೆ ಕಾರಣ ಎಂದು ಹೇಳಿದ ನ್ಯಾಯಾಲಯ, ಈ ಕೃಷಿ ತ್ಯಾಜ್ಯ ಸುಡುವುದನ್ನು ನಿಲ್ಲಿಸಲು ಕ್ರಮಕೈಗೊಳ್ಳುವಂತೆ ಪಂಜಾಬ್ ಸರ್ಕಾರಕ್ಕೆ ಸೂಚಿಸಿದೆ.
“ಅದು ನಿಲ್ಲಬೇಕು. ನೀವು ಅದನ್ನು ಹೇಗೆ ಮಾಡುವಿರೋ ನಮಗೆ ಗೊತ್ತಿಲ್ಲ, ಅದು ನಿಮ್ಮ ಕೆಲಸ. ಆದರೆ ಅದು ನಿಲ್ಲಬೇಕು. ಏನಾದರೂ ತಕ್ಷಣ ಮಾಡಬೇಕು,” ಎಂದು ಪಂಜಾಬ್ ಸರ್ಕಾರದ ವಕೀಲರಿಗೆ ನ್ಯಾಯಾಲಯ ಹೇಳಿದೆ.
ಮುಂದಿನ ವಿಚಾರಣೆ ಶುಕ್ರವಾರ ನಡೆಯಲಿದೆ ಎಂದು ಹೇಳಿದೆ ನ್ಯಾಯಾಲಯ, ವಾಯು ಮಾಲಿನ್ಯಕ್ಕೆ ಇನ್ನೊಂದು ಕಾರಣ ಎಂದು ಹೇಳಲಾದ ವಾಹನಗಳ ಹೊರಸೂಸುವಿಕೆ ವಿಚಾರವನ್ನೂ ಪರೀಶೀಲಿಸುವುದಾಗಿ ತಿಳಿಸಿತು.
ಕಳೆದ ಕೆಲ ದಿನಗಳಲ್ಲಿ ಬಹಳಷ್ಟು ತೀವ್ರ ವಾಯು ಮಾಲಿನ್ಯವನ್ನು ರಾಜಧಾನಿ ಎದುರಿಸುತ್ತಿರುವ ಕುರಿತು ದೂರಿ ದಾಖಲಾದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಅರ್ಜಿದಾರರ ಪರ ವಕೀಲೆ ಅಪರಾಜಿತಾ ಸಿಂಗ್ ತಮ್ಮ ವಾದ ಮಂಡನೆ ವೇಳೆ, ಪಂಜಾಬ್‌ನಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯನ್ನು ನಿಯಂತ್ರಿಸಲಾಗಿಲ್ಲ ಎಂದು ಹೇಳಿದರು.