ಮುಸ್ಲಿಂ ವಿದ್ಯಾರ್ಥಿಗೆ ಥಳಿತ; ಉತ್ತರ ಪ್ರದೇಶದ ವಿವಾದಿತ ಶಾಲೆ ಸದ್ಯಕ್ಕೆ ಬಂದ್

Update: 2023-08-27 17:04 GMT

Screengrab: Twitter

ಹೊಸದಿಲ್ಲಿ: ಮುಸ್ಲಿಂ ವಿದ್ಯಾರ್ಥಿಯ ಕಪಾಳಕ್ಕೆ ಸಹಪಾಠಿಗಳಿಂದ ಹೊಡೆಸಿದ್ದ ಶಿಕ್ಷಕಿ ಸೇವೆ ಸಲ್ಲಿಸುತ್ತಿರುವ ಶಾಲೆಯನ್ನು ತನಿಖೆ ಬಾಕಿಯಿರುವಾಗಲೇ ಮುಚ್ಚುವಂತೆ ಆದೇಶಿಸಲಾಗಿದೆ ಎಂದು ಪ್ರಾಧಿಕಾರಗಳು ತಿಳಿಸಿವೆ. ಈ ಕುರಿತು ಶಿಕ್ಷಣ ಇಲಾಖೆಯು ಶಾಲಾ ನಿರ್ವಾಹಕರಿಗೆ ನೋಟಿಸ್ ರವಾನಿಸಿದೆ ಎಂದು ndtv.com ವರದಿ ಮಾಡಿದೆ.

ಈ ನಡುವೆ, ಆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಸಮೀಪದ ಶಾಲೆಗೆ ದಾಖಲಿಸಿ, ಅವರ ವ್ಯಾಸಂಗಕ್ಕೆ ಅಡ್ಡಿಯಾಗದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಿದ್ದಾರೆ ಎಂದೂ ಪ್ರಾಧಿಕಾರಗಳು ಹೇಳಿವೆ.

ಮುಝಾಫ್ಫರ್ ನಗರದ ನೇಹಾ ಸಾರ್ವಜನಿಕ ಶಾಲೆಯಲ್ಲಿ ಪ್ರಾಂಶುಪಾಲ ಹುದ್ದೆಯನ್ನೂ ನಿರ್ವಹಿಸುತ್ತಿರುವ ಆರೋಪಿ ಶಿಕ್ಷಕಿ ತೃಪ್ತಾ ತ್ಯಾಗಿ, 7 ವರ್ಷದ ಮುಸ್ಲಿಂ ಬಾಲಕನ ಕಪಾಳಕ್ಕೆ ಹೊಡೆಯುವಂತೆ ಸಹಪಾಠಿಗಳಿಗೆ ಸೂಚಿಸಿರುವ ವಿಡಿಯೊ ವೈರಲ್ ಆಗಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಆದರೆ, ಅದೊಂದು ಕ್ಷುಲ್ಲಕ ವಿಷಯ ಎಂದು ಹೇಳುವ ಮೂಲಕ ಆ ಶಿಕ್ಷಕಿಯು ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು. ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ನಡುವೆ, ಘಟನೆಯ ಸಂತ್ರಸ್ತ ಬಾಲಕ ಹಾಗೂ ಆತನ ಪೋಷಕರೊಂದಿಗೆ ಮಕ್ಕಳ ಕಲ್ಯಾಣ ಸಮಿತಿಯು ಆಪ್ತ ಸಮಾಲೋಚನೆ ನಡೆಸಿದೆ. “ನನ್ನ ಪುತ್ರನಿಗೆ 7 ವರ್ಷ ವಯಸ್ಸು. ಈ ಘಟನೆಯು ಆಗಸ್ಟ್ 24ರಂದು ನಡೆದಿದೆ. ಆ ಶಿಕ್ಷಕಿಯು ನನ್ನ ಮಗನಿಗೆ ಆತನ ಸಹಪಾಠಿಗಳು ಪದೇ ಪದೇ ಹೊಡೆಯುವಂತೆ ಮಾಡಿದ್ದಾರೆ. ನನ್ನ ಪುತ್ರನಿಗೆ ಒಂದು ಅಥವಾ ಎರಡು ಗಂಟೆ ಕಾಲ ಕಿರುಕುಳ ನೀಡಲಾಗಿದೆ. ಆತ ಭಯಭೀತನಾಗಿದ್ದಾನೆ” ಎಂದು ಘಟನೆಯ ನಂತರ ಬಾಲಕನ ತಂದೆಯು ಹೇಳಿಕೆ ನೀಡಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆಯ ವಿಡಿಯೊ ಕುರಿತು ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದೊಂದು ದ್ವೇಷಾಪರಾಧ ಪ್ರಕರಣವೆಂದು ಎಲ್ಲ ರಾಜಕಾರಣಿಗಳೂ ಪಕ್ಷಾತೀತವಾಗಿ ಖಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News