ಉತ್ತರಾಖಂಡ ವಿಧಾನಸಭಾ ಉಪ ಚುನಾವಣೆ| ಮುಸ್ಲಿಂ ಮತದಾರರ ಮೇಲೆ ಹಲ್ಲೆ, ಮತದಾನಕ್ಕೆ ತಡೆ: ಆರೋಪ
ಮಂಗ್ಲೌರ್ (ಉತ್ತರಾಖಂಡ): ಇಂದು (ಬುಧವಾರ) ನಡೆಯುತ್ತಿರುವ ವಿಧಾನಸಭಾ ಉಪ ಚುನಾವಣೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು, ಹಲವು ಮುಸ್ಲಿಂ ಮತದಾರರು ಗಾಯಗೊಂಡಿದ್ದಾರೆನ್ನಲಾದ ಘಟನೆ ಉತ್ತರಾಖಂಡ ರಾಜ್ಯದ ಮಂಗ್ಲೌರ್‌ನಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಮತದಾನ ಮಾಡದಂತೆ ಮುಸ್ಲಿಂ ಮತದಾರರಿಗೆ ತಡೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ವೃದ್ಧರೂ ಸೇರಿದಂತೆ ಹಲವಾರು ಮುಸ್ಲಿಂ ಮತದಾರರ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರ ಬಟ್ಟೆಗಳು ರಕ್ತಸಿಕ್ತವಾಗಿರುವುದು ಕಂಡು ಬಂದಿದೆ. ಈ ಪೈಕಿ ಹಲವರು ತಮಗೆ ಮತದಾನ ಮಾಡದಂತೆ ತಡೆ ಒಡ್ಡಲಾಗಿದೆ ಎಂದು ಆರೋಪಿಸಿದ್ದಾರೆ.
ಸ್ಥಳದಲ್ಲಿ ಯಾವುದೇ ಗುಂಡಿನ ದಾಳಿ ನಡೆದಿರುವುದು ದೃಢಪಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರಾದರೂ, ದುಷ್ಕರ್ಮಿಗಳು ಬಹಿರಂಗವಾಗಿ ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಖಾಝಿ ನಿಝಾಮುದ್ದೀನ್ ಆರೋಪಿಸಿದ್ದಾರೆ.
"ದುಷ್ಕರ್ಮಿಗಳು ಬಹಿರಂಗವಾಗಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಹತ್ಯೆಯಾಗಿದೆ. ಈ ದಾಳಿಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ ಎಂಬ ಸುದ್ದಿಯೂ ಇದೆ. ಘಟನಾ ಸ್ಥಳದಲ್ಲಿ ಆ್ಯಂಬುಲೆನ್ಸ್ ಆಗಲಿ ಅಥವಾ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಇನ್ನಾವುದೇ ಕ್ರಮಗಳನ್ನಾಗಲಿ ಕೈಗೊಳ್ಳಲಾಗಿಲ್ಲ" ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮೂರು ಬಾರಿ ಸಂಸದರೂ ಆಗಿದ್ದ ನಿಝಾಮುದ್ದೀನ್ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸ್ವಪನ್ ಕಿಶೋರ್ ಸಿಂಗ್, "ಪರಿಸ್ಥಿತಿ ಸಹಜವಾಗಿದೆ ಹಾಗೂ ಮತದಾನವು ಶಾಂತಿಯುತವಾಗಿ ನಡೆಯುತ್ತಿದೆ" ಎಂದು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಘಟನೆಯನ್ನು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಕೂಡಾ ಬಲವಾಗಿ ಖಂಡಿಸಿದ್ದು, ಇದೊಂದು ಗಂಭೀರ ಪರಿಸ್ಥಿತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಮಂಗ್ಲೌರ್ ವಿಧಾನಸಭಾ ಕ್ಷೇತ್ರದ ಬಿಎಸ್‌ಪಿ ಶಾಸಕ ಸರ್ವತ್ ಕರೀಂ ಅನ್ಸಾರಿ ಮೃತಪಟ್ಟಿದ್ದರಿಂದ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.