ವಿಕ್ರಮ್ ಲ್ಯಾಂಡರ್ ಮೇಲೆ ಬೆಳಕು ಪ್ರತಿಫಲಿಸಿದ ನಾಸಾದ ಎಲ್‌ಆರ್‌ಒ
ಬೆಂಗಳೂರು: ಇದೇ ಪ್ರಪ್ರಥಮ ಬಾರಿಗೆ ಚಂದ್ರನ ಅಂಗಳದಲ್ಲಿರುವ ವಿಕ್ರಮ್ ಲ್ಯಾಂಡರ್ ಮೇಲೆ ಚಂದ್ರನ ಸುತ್ತ ಪರಿಭ್ರಮಣ ನಡೆಸುತ್ತಿರುವ ಗಗನ ನೌಕೆ ಹಾಗೂ ಲೇಸರ್ ರೆಟ್ರೊರಿಫ್ಲೆಕ್ಟರಿ ಅರ್ರೆ ಸಾಧನದ ನಡುವೆ ಲೇಸರ್ ಕಿರಣವನ್ನು ಹಾಯಿಸಿ ಮತ್ತು ಪ್ರತಿಫಲಿಸುವ ಮೂಲಕ ಚಂದ್ರನ ಮೇಲ್ಮೈ ಮೇಲೆ ಹೊಸ ಶೈಲಿಯಲ್ಲಿ ಗುರಿಗಳನ್ನು ಪತ್ತೆ ಹಚ್ಚುವ ಬಾಗಿಲನ್ನು ನಾಸಾ ತೆರೆದಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ನಾಸಾ ಸಂಸ್ಥೆಯು, “ಡಿಸೆಂಬರ್ 12, 2023ರಂದು ಮಧ್ಯಾಹ್ನ 3 ಗಂಟೆ ವೇಳೆಗೆ ನಾಸಾ ಎಲ್ಆರ್ಒ, ವಿಕ್ರಮ್ ಲ್ಯಾಂಡರ್ ನತ್ತ ತನ್ನ ಲೇಸರ್ ಆಲ್ಟಿಮೀಟರ್ ಮೂಲಕ ಗುರಿ ಇಟ್ಟಿತು. ಎಲ್ಆರ್ಒ ತನ್ನತ್ತ ಲೇಸರ್ ಕಿರಣಗಳನ್ನು ಹಾಯಿಸಿದಾಗ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ‍್ರುವದ ಮಂಝಿನಸ್ ಕುಳಿಯ ಬಳಿಯಲ್ಲಿತ್ತು. ವಿಕ್ರಮ್ ಲ್ಯಾಂಡರ್ ಒಳಗಿದ್ದ ನಾಸಾ ರೆಟ್ರೊರಿಫ್ಲೆಕ್ಟರ್ ಎಲ್ಆರ್ಒ ಹಾಯಿಸಿದ ಲೇಸರ್ ಕಿರಣವನ್ನು ಪ್ರತಿಫಲಿಸಿದಾಗ, ನಮ್ಮ ತಂತ್ರವು ಕೊನೆಗೂ ಫಲಿಸಿತು ಎಂದು ನಾಸಾ ವಿಜ್ಞಾನಿಗಳಿಗೆ ಮನವರಿಕೆಯಾಯಿತು” ಎಂದು ಹೇಳಿದೆ.
ನಾಸಾ ಸಾಧನೆಯನ್ನು ಶ್ಲಾಘಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು, ಎಲ್ಆರ್ಒ ಚಂದ್ರನ ಮೇಲೆ ಗುರುತಿನ ಉಲ್ಲೇಖಗಳನ್ನು ಪತ್ತೆ ಹಚ್ಚುವ ಪ್ರಮಾಣೀಕೃತ ಬಿಂದುವಾಗಿ ಬದಲಾಗಿದೆ ಎಂದು ಹೇಳಿದೆ.