ಮನಮೋಹನ್ ಸಿಂಗ್‌ಗೆ ಸ್ಮಾರಕ ನಿರ್ಮಿಸಲು ಆಗ್ರಹಿಸಿ ರಾಷ್ಟ್ರಪತಿಗೆ ನವಜೋತ್ ಸಿಂಗ್ ಸಿಧು ಪತ್ರ
ಇಂದೋರ್ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರಾಜ್‌ಘಾಟ್ ಸಂಕೀರ್ಣದಲ್ಲಿ ಸ್ಮಾರಕ ನಿರ್ಮಿಸಲು ಕೇಂದ್ರಕ್ಕೆ ನಿರ್ದೇಶಿಸುವಂತೆ ಆಗ್ರಹಿಸಿ ಪಂಜಾಬ್ ಕಾಂಗ್ರೆಸ್‌ನ ಹಿರಿಯ ನಾಯಕ ನವಜೋತ್ ಸಿಂಗ್ ಸಿಧು ರವಿವಾರ ರಾಷ್ಟ್ರಪತಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಅವರ ಸ್ಮಾರಕ ನಿರ್ಮಾಣ ಮಾಡುವ ಸ್ಥಳದಲ್ಲಿ ನೆರವೇರಿಸುವ ಬದಲು ನಿಗಮ್‌ಬೋಧ್ ಘಾಟ್‌ನಲ್ಲಿ ನಡೆಸುವ ಮೂಲಕ ಕೇಂದ್ರ ಸರಕಾರ ದೇಶದ ಮೊದಲ ಸಿಕ್ಖ್ ಪ್ರಧಾನಿಗೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದ ಒಂದು ದಿನದ ಬಳಿಕ ಸಿಧು ರಾಷ್ಟ್ರಪತಿ ಅವರಿಗೆ ಈ ಪತ್ರ ಬರೆದಿದ್ದಾರೆ.
ಸ್ಮಾರಕಕ್ಕೆ ಜಾಗ ಗುರುತಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರಕಾರ ಈಗಾಗಲೇ ಸ್ಮಾರಕ ನಿರ್ಮಿಸುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಶೀಘ್ರದಲ್ಲಿ ಸ್ಥಳ ಗುರುತಿಸಲು ಟ್ರಸ್ಟ್ ರಚಿಸಲಾಗುವುದು ಎಂದು ಹೇಳಿದೆ.
ಮನಮೋಹನ್ ಸಿಂಗ್ ಅವರು ಡಿಸೆಂಬರ್ 26ರಂದು ನಿಧನರಾಗಿದ್ದರು. ಡಿಸೆಂಬರ್ 28ರಂದು ಅವರ ಅಂತ್ಯಕ್ರಿಯೆಯನ್ನು ನಿಗಮ್‌ಬೋಧ್ ಘಾಟ್‌ನಲ್ಲಿ ನೆರವೇರಿಸಲಾಗಿತ್ತು.