ಒಂದೇ ತರಹ ಕಾಣುವ ಚಿಹ್ನೆಗಳಿಂದಾಗಿ ನಮ್ಮ ಅಭ್ಯರ್ಥಿಗೆ ಸೋಲು

Update: 2024-06-06 15:26 GMT

ಜಯಂತ್ ಪಾಟೀಲ್ |  PC : NDTV 

ಮುಂಬೈ: ಒಂದೇ ತರಹ ಕಾಣುವ ಚುನಾವಣಾ ಚಿಹ್ನೆಗಳ ಕಾರಣದಿಂದಾಗಿ ಮಹಾರಾಷ್ಟ್ರದ ಸತಾರಾ ಲೋಕಸಭಾ ಕ್ಷೇತ್ರದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ ಪವಾರ್ ಬಣ)ದ ಅಭ್ಯರ್ಥಿ ಸೋತಿದ್ದಾರೆ ಎಂದು ಪಕ್ಷದ ನಾಯಕ ಜಯಂತ್ ಪಾಟೀಲ್ ಬುಧವಾರ ಆರೋಪಿಸಿದ್ದಾರೆ.

‘ತುತ್ತೂರಿ ಊದುತ್ತಿರುವ ಮನುಷ್ಯ’ ನಮ್ಮ ಪಕ್ಷದ ಚುನಾವಣಾ ಚಿಹ್ನೆಯಾಗಿದೆ ಎಂದು ಹೇಳಿದ ಅವರು, ಪಕ್ಷೇತರ ಅಭ್ಯರ್ಥಿಯೊಬ್ಬರಿಗೆ ಚುನಾವಣಾ ಚಿಹ್ನೆಯಾಗಿ ‘ತುತ್ತೂರಿ’ ನೀಡಲಾಗಿತ್ತು ಎಂದು ಅವರು ಹೇಳಿದರು.

ಚಿಹ್ನೆಗಳ ಸಾಮ್ಯತೆಗಳಿಂದಾಗಿ ಮತದಾರರು ಗೊಂದಲಕ್ಕೊಳಗಾದರು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಭಿಪ್ರಾಯಪಟ್ಟರು.

ಸತಾರಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಉದಯನ್ರಾಜೆ ಭೋಂಸ್ಲೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ ಪವಾರ್ ಬಣ)ದ ಅಭ್ಯರ್ಥಿ ಶಶಿಕಾಂತ್ ಜಯವಂತರಾವ್ರನ್ನು 32,771 ಮತಗಳಿಂದ ಸೋಲಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಗದೆ ಸಂಜಯ್ ಕೊಂಡಿಬ 37,062 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಅವರಿಗೆ ‘ತುತ್ತೂರಿ’ ಚಿಹ್ನೆಯನ್ನು ಕೊಡಲಾಗಿದ್ದು, ಅದು ಶರದ್ ಪವಾರ್ ಬಣದ ಚಿಹ್ನೆಯಂತೆಯೇ ಕಾಣುತ್ತದೆ.

ಮತಗಳನ್ನು ವಿಭಜಿಸುವ ಉದ್ದೇಶದಿಂದಲೇ ಪಕ್ಷೇತರ ಅಭ್ಯರ್ಥಿಗಳಿಗೆ ಒಂದೇ ತರ ಕಾಣುವ ಚಿಹ್ನೆಗಳನ್ನು ನೀಡಲಾಗಿತ್ತು ಎಂದು ಪಾಟೀಲ್ ಆರೋಪಿಸಿದರು.

ಈ ಬಗ್ಗೆ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡುವುದು ಎಂದು ಅವರು ಹೇಳಿದರು.

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವು ವಿಭಜನೆಗೊಂಡ ಬಳಿಕ, ಫೆಬ್ರವರಿಯಲ್ಲಿ ಶರದ್ಚಂದ್ರ ಪವಾರ್ ಬಣದ ಪಕ್ಷಕ್ಕೆ ‘ತುತ್ತೂರಿ ಊದುತ್ತಿರುವ ಮನುಷ್ಯ’ನ ಚಿಹ್ನೆಯನ್ನು ನೀಡಲಾಗಿತ್ತು.

ಚುನಾವಣಾ ಆಯೋಗವು ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು ಮೂಲ ಪಕ್ಷ ಎಂಬುದಾಗಿ ಪರಿಗಣಿಸಿ ಪಕ್ಷದ ಮೂಲ ಚಿಹ್ನೆ ‘ಗಡಿಯಾರ’ವನ್ನು ಅದಕ್ಕೆ ನೀಡಿತ್ತು.

‘ತುತ್ತೂರಿ’ ಚಿಹ್ನೆಯ ಅಭ್ಯರ್ಥಿಗಳಿಗೆ ಮತಗಳ ಸುರಿಮಳೆ!

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ಚಂದ್ರ ಪವಾರ್)ದ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಭಾರೀ ಸಂಖ್ಯೆಯ ಮತಗಳು ‘ತುತ್ತೂರಿ’ ಚಿಹ್ನೆ ಹೊಂದಿರುವ ಪಕ್ಷೇತರ ಅಭ್ಯರ್ಥಿಗಳಿಗೆ ಹೋಗಿವೆ ಎಂದು ಜಯಂತ ಪಾಟೀಲ್ ಹೇಳಿದರು.

‘‘ದಿಂಡೋರಿ ಕ್ಷೇತ್ರದಲ್ಲಿ, ತುತ್ತೂರಿ ಚಿಹ್ನೆ ಹೊಂದಿರುವ ಪಕ್ಷೇತರ ಅಭ್ಯರ್ಥಿಯು ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸಿದ್ದಾರೆ’’ ಎಂದು ಅವರು ತಿಳಿಸಿದರು.

ಮದ ಲೋಕಸಭಾ ಕ್ಷೇತ್ರದಲ್ಲಿ, ‘ತುತ್ತೂರಿ’ ಚಿಹ್ನೆ ಹೊಂದಿರುವ ಅಭ್ಯರ್ಥಿಗೆ ಸುಮಾರು 48,000 ಮತಗಳು ಸಿಕ್ಕಿವೆ ಮತ್ತು ಬೀಡ್ ಕ್ಷೇತ್ರದಲ್ಲಿ ತುತ್ತೂರಿ ಚಿಹ್ನೆ ಹೊಂದಿರುವ ಅಭ್ಯರ್ಥಿಗೆ 54,000 ಮತಗಳು ಹೋಗಿವೆ ಎಂದು ಅವರು ಹೇಳಿದರು.

‘‘ಚುನಾವಣೆಗೆ ಮೊದಲೇ ನಾವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೆವು. ಆದರೆ ಚುನಾವಣಾ ಆಯೋಗವು ನಮ್ಮ ಆಕ್ಷೇಪವನ್ನು ನಿರ್ಲಕ್ಷಿಸಿತು. ನಮ್ಮ ಮತಗಳನ್ನು ವಿಭಜಿಸುವುದಕ್ಕಾಗಿ ಉದ್ದೇಶಪೂರ್ವಕವಾಗಿಯೇ ಈ ಚಿಹ್ನೆಗಳನ್ನು ಕೊಟ್ಟಿರುವಂತೆ ಅನಿಸುತ್ತಿದೆ’’ ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News