ನೀಟ್-ಯುಜಿ ಪರೀಕ್ಷೆ | ತಜ್ಞರ ಸಮಿತಿ ಶಿಫಾರಸು ಜಾರಿಗೆ ಬದ್ಧ: ಸುಪ್ರೀಂ ಕೋರ್ಟ್‌ಗೆ ಕೇಂದ್ರ
ಹೊಸದಿಲ್ಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ)ಯಿಂದ ನೀಟ್-ಯುಜಿ 2024 ಪರೀಕ್ಷೆಯ ನಿರ್ವಹಣೆಯನ್ನು ಪರಿಶೀಲಿಸಿರುವ ಏಳು ಸದಸ್ಯರ ತಜ್ಞರ ಸಮಿತಿಯ ಎಲ್ಲ ಶಿಫಾರಸುಗಳನ್ನು ಜಾರಿಗೊಳಿಸುವುದಾಗಿ ಕೇಂದ್ರ ಸರಕಾರವು ಗುರುವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಕಳೆದ ವರ್ಷದ ಆ.2ರಂದು ಸರ್ವೋಚ್ಚ ನ್ಯಾಯಾಲಯವು ಪರೀಕ್ಷೆಯಲ್ಲಿ ವ್ಯವಸ್ಥಿತ ಅವ್ಯವಹಾರಗಳು ಅಥವಾ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ವಿವಾದಗ್ರಸ್ತ ನೀಟ್-ಯುಜಿ 2024 ಪರೀಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿತ್ತು. ನಂತರ ನ್ಯಾಯಾಲಯವು ಮಾಜಿ ಇಸ್ರೋ ಅಧ್ಯಕ್ಷ ಕೆ.ರಾಧಾಕೃಷ್ಣನ್ ನೇತೃತ್ವದ ತಜ್ಞರ ಸಮಿತಿಗೆ ಎನ್‌ಟಿಎ ಕಾರ್ಯನಿರ್ವಹಣೆಯನ್ನು ಪುನರ್‌ಪರಿಶೀಲಿಸುವ ಹಾಗೂ ಭವಿಷ್ಯದ ಪರೀಕ್ಷೆಗಳಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಲು ಮತ್ತು ಅಕ್ರಮಗಳನ್ನು ತಡೆಗಟ್ಟಲು ಶಿಫಾರಸುಗಳನ್ನು ಸಲ್ಲಿಸುವ ಹೊಣೆಯನ್ನೂ ವಹಿಸಿತ್ತು.
ತಜ್ಞರ ಸಮಿತಿಯು ಸರಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ ಮತ್ತು ಸರಕಾರವು ಅದರ ಎಲ್ಲ ಶಿಫಾರಸುಗಳನ್ನು ಜಾರಿಗೊಳಿಸಲಿದೆ ಎಂದು ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಗುರುವಾರ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ್ ಮತ್ತು ಮನೋಜ ಮಿಶ್ರಾ ಅವರ ಪೀಠಕ್ಕೆ ತಿಳಿಸಿದರು.
ಪೀಠವು ವಿಚಾರಣೆಯನ್ನು ಎಪ್ರಿಲ್‌ಗೆ ಮುಂದೂಡಿದೆ.
ಅಕ್ಟೋಬರ್ 2024ರಲ್ಲಿ ಸರ್ವೋಚ್ಚ ನ್ಯಾಯಾಲಯವು ತನ್ನ ವರದಿಯನ್ನು ಸಲ್ಲಿಸಲು ತಜ್ಞರ ಸಮಿತಿಗೆ ಗಡುವನ್ನು ವಿಸ್ತರಿಸಿತ್ತು.
ಕಳೆದ ವರ್ಷದ ನವಂಬರ್‌ನಲ್ಲಿ ಸರ್ವೋಚ್ಚ ನ್ಯಾಯಾಲಯವು ಹೊಸದಾಗಿ ನೀಟ್-ಯುಜಿ 2024 ಪರೀಕ್ಷೆಯನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ,ತನ್ನ ಆ.2ರ ತೀರ್ಪನ್ನು ಎತ್ತಿ ಹಿಡಿದಿತ್ತು.