ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ : ರಾಂಚಿಯ ವೈದ್ಯಕೀಯ ವಿದ್ಯಾರ್ಥಿನಿಯನ್ನು ಎರಡನೇ ದಿನವೂ ಪ್ರಶ್ನಿಸಿದ ಸಿಬಿಐ
ರಾಂಚಿ(ಜಾರ್ಖಂಡ್) : ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಿಬಿಐ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಆರ್‌ಐಎಂಎಸ್)ಯ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯನ್ನು ಎರಡನೇ ದಿನವಾದ ಶುಕ್ರವಾರವೂ ವಿಚಾರಣೆಗೊಳಪಡಿಸಿದೆ. ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಏಮ್ಸ್-ಪಾಟ್ನಾದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳನ್ನು ಬಂಧಿಸಿದೆ.
ಸಿಬಿಐನಿಂದ ವಿಚಾರಣೆಗೊಳಗಾಗಿರುವ ವಿದ್ಯಾರ್ಥಿನಿ ಆರ್‌ಐಎಂಎಸ್‌ನ ಮಹಿಳೆಯರ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಾಳೆ.
ಸಿಬಿಐ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯನ್ನು ಪ್ರಶ್ನಿಸುತ್ತಿದೆ. ವಿದ್ಯಾರ್ಥಿನಿಯ ವಿಚಾರಣೆಗೆ ಸಂಬಂಧಿಸಿದಂತೆ ಸಿಬಿಐ ಬುಧವಾರ ಆಸ್ಪತ್ರೆ ಆಡಳಿತವನ್ನು ಸಂಪರ್ಕಿಸಿತ್ತು. ಆಡಳಿತವು ಸಿಬಿಐ ತಂಡಕ್ಕೆ ಪೂರ್ಣ ಸಹಕಾರವನ್ನು ನೀಡುತ್ತಿದೆ ಎಂದು ಆರ್‌ಐಎಂಎಸ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೀವ ರಂಜನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ವಿದ್ಯಾರ್ಥಿನಿಯ ಪೋಷಕರು ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದು,ಅವರಿಗೆ ಪರಿಸ್ಥಿತಿಯ ಕುರಿತು ಮಾಹಿತಿಯನ್ನು ನೀಡಲಾಗಿದೆ ಎಂದರು.
ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಈವರೆಗೆ ಆರು ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದೆ. ಏಮ್ಸ್-ಪಾಟ್ನಾದ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾದ ಚಂದನ ಸಿಂಗ್,ರಾಹುಲ್ ಅನಂತ ಮತ್ತು ಕುಮಾರ ಶಾನು ಹಾಗೂ ಎರಡನೇ ವರ್ಷದ ವಿದ್ಯಾರ್ಥಿ ಕರಣ ಜೈನ್ ಅವರನ್ನು ಸಿಬಿಐ ಗುರುವಾರ ಬಂಧಿಸಿತ್ತು. ಇದಕ್ಕೂ ಮುನ್ನ ವಿದ್ಯಾರ್ಥಿಗಳನ್ನು ಅವರ ಹಾಸ್ಟೆಲ್ ಕೊಠಡಿಗಳಲ್ಲಿ ತೀವ್ರ ವಿಚಾರಣೆಗೊಳಪಡಿಸಲಾಗಿತ್ತು. ಅವರ ಕೊಠಡಿಗಳಿಗೆ ಬೀಗಮುದ್ರೆ ಹಾಕಲಾಗಿದೆ.